ಮಡಿಕೇರಿ: ಉರುಳು ಬಳಸಿ ಕಾಡು ಕುರಿ ಬೇಟೆ; ಆರೋಪಿ ಸೆರೆ

ಮಡಿಕೇರಿ, ಅ.28 : ಕಾಫಿ ತೋಟದಲ್ಲಿ ಉರುಳು ಬಳಸಿ ಕಾಡು ಕುರಿಯನ್ನು ಭೇಟಿಯಾಡಿದ ಆರೋಪಿಯನ್ನು ಮಡಿಕೇರಿ ಉಪವಲಯ ಅರಣ್ಯ ಸಿಬ್ಬಂದಿಗಳು ಮತ್ತು ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ಮೂಲಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂರ್ನಾಡು ಸಮೀಪದ ಕುಂಬಳದಾಳು ನಿವಾಸಿ ಕೆ.ಹೇಮಂತ್(36) ಬಂಧಿತ ಆರೋಪಿ. ಅ.26ರ ರಾತ್ರಿ ಕುಂಬಳದಾಳುವಿನ ಪಿ.ವಾಸು ಮತ್ತು ದಿನೇಶ್ ಎಂಬವರಿಗೆ ಸೇರಿದ ಅಡಿಕೆ ಮತ್ತು ಕಾಫಿ ತೋಟದಲ್ಲಿ ಆರೋಪಿ ಹೇಮಂತ್ ಕಾಡು ಪ್ರಾಣಿಯ ಬೇಟೆಗೆಂದು ಉರುಳು ಹಾಕಿದ್ದ. ಬೇಟೆಗಾಗಿ ಹಾಕಿದ್ದ ಉರುಳಿನಲ್ಲಿ ಕಾಡುಕುರಿ ಸಿಲುಕಿ ಮೃತಪಟ್ಟಿತ್ತು. ಬಳಿಕ ಆರೋಪಿ ಹೇಮಂತ್ ಕಾಡುಕುರಿಯನ್ನು ಮಾಂಸ ಮಾಡಿ ಮನೆಗೆ ಹೊತ್ತೊಯ್ದಿದ್ದ.
ಈ ಕುರಿತು ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿಗಳು ಕುಂಬಳದಾಳುವಿನ ಹೇಮಂತ್ ಮನೆಯ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭ ಒಟ್ಟು 4 ಕೆ.ಜಿ. ಕಾಡು ಕುರಿಯ ಮಾಂಸ ಪತ್ತೆಯಾಗಿದೆ. ಆರೋಪಿ ಹೇಮಂತ್‍ನನ್ನು ಬಂಧಿಸಿ ಬೇಟೆಗೆ ಬಳಸಿದ ಉರುಳು, ಮಾಂಸ ಮಾಡಲು ಉಪಯೋಗಿಸಿದ ಕತ್ತಿ ಮತ್ತು ಮರದ ಕುಂಟೆ ಹಾಗೂ ತೋಟದ ತೋಡಿನಲ್ಲಿ ಎಸೆದಿದ್ದ ಕಾಡುಕುರಿಯ ಚರ್ಮ ಮತ್ತು 3 ಕಾಲುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಹೇಮಂತ್‍ನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು ಮಡಿಕೇರಿ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಮಡಿಕೇರಿ ಉಪ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ವೈ.ಕೆ. ಜಗದೀಶ್, ಉಪವಲಯ ಅರಣ್ಯಾಧಿಕಾರಿ ಆರೋಗ್ಯ ಸ್ವಾಮಿ, ಅರಣ್ಯ ರಕ್ಷಕ ತಿಮ್ಮಯ್ಯ, ಕುಶಾಲಪ್ಪ, ಭವ್ಯ, ಅರಣ್ಯ ವೀಕ್ಷಕ ವಾಸು, ವಾಹನ ಚಾಲಕ ಶ್ಯಾಮ್, ಸುಧಾ, ಆರ್‍ಆರ್‍ಟಿ ತಂಡದ ಭಾಸ್ಕರ, ಯೋಗೇಶ್ ಪೊಲೀಸ್ ಅರಣ್ಯ ಸಂಚಾರಿ ದಳದ ಎಎಸ್‍ಐ ಸುಭಾಷ್, ಸಿಬ್ಬಂದಿಗಳಾದ ನಾಣಯ್ಯ, ಲಿಂಗರಾಜು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.







