ಏಶ್ಯನ್ ಚಾಂಪಿಯನ್ಸ್ ಟ್ರೋಫಿ: ಭಾರತ ಫೈನಲ್‌ಗೆ; ಪಾಕ್‌ಎದುರಾಳಿ

ಮಸ್ಕತ್, ಅ.28: ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಸೆಮಿ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಭಾರತ ಕೊನೆಯ ಐದು ನಿಮಿಷಗಳಲ್ಲಿ ಆತಂಕದ ಕ್ಷಣಗಳನ್ನು ಎದುರಿಸಿದರೂ ಜಪಾನ್ ವಿರುದ್ಧ 3-2 ಅಂತರದಿಂದ ರೋಚಕ ಜಯ ಸಾಧಿಸಿದೆ.
ಭಾರತ ತಂಡ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಉಭಯ ತಂಡಗಳ ನಡುವಿನ ಫೈನಲ್ ಪಂದ್ಯ ರವಿವಾರ ನಡೆಯಲಿದೆ. ಜಪಾನ್ ಹಾಗೂ ಮಲೇಶ್ಯಾ ತಂಡಗಳು ಮೂರನೇ ಸ್ಥಾನಕ್ಕಾಗಿ ಹೋರಾಟಕ್ಕಿಳಿಯಲಿವೆ.
ಗ್ರೂಪ್ ಹಂತದಲ್ಲಿ ಜಪಾನ್ ತಂಡವನ್ನು 9-0 ಅಂತರದಿಂದ ಸುಲಭವಾಗಿ ಸೋಲಿಸಿದ್ದ ಭಾರತ ಶನಿವಾರ ನಡೆದ ಎರಡನೇ ಸೆಮಿ ಫೈನಲ್‌ನಲ್ಲಿ ಏಶ್ಯನ್ ಗೇಮ್ಸ್ ಚಾಂಪಿಯನ್ ಜಪಾನೀಯರಿಂದ ಸ್ಪರ್ಧೆ ಎದುರಿಸಿತು.
ಇದಕ್ಕೆ ಮೊದಲು ನಡೆದ ಮೊದಲ ಸೆಮಿ ಫೈನಲ್‌ನಲ್ಲಿ ಪಾಕಿಸ್ತಾನ ತಂಡ ಶೂಟೌಟ್‌ನಲ್ಲಿ ಮಲೇಶ್ಯಾವನ್ನು 3-1 ಅಂತರದಿಂದ ಮಣಿಸಿತು. ಉಭಯ ತಂಡಗಳು ನಿಗದಿತ ಸಮಯದಲ್ಲಿ 4-4 ರಿಂದ ಸಮಬಲ ಸಾಧಿಸಿದ್ದವು.
ಜಪಾನ್ ವಿರುದ್ಧದ ಅಂತಿಮ-4ರ ಪಂದ್ಯದಲ್ಲಿ ಭಾರತದ ಪರ ಗುರ್ಜಂತ್ ಸಿಂಗ್(19ನೇ ನಿಮಿಷ), ಚಿಂಗ್ಲೆಸನಾ(44ನೇ ನಿ.) ಹಾಗೂ ದಿಲ್‌ಪ್ರೀತ್ ಸಿಂಗ್(55ನೇ ನಿ.)ತಲಾ ಒಂದು ಗೋಲು ಬಾರಿಸಿದರು. ಜಪಾನ್‌ನ ಹಿರೊಟಕಾ ವಕಾರು(22ನೇ ನಿ.) ಹಾಗೂ ನಿರೊಟಕಾ ಝೆಂಡಾನಾ(56ನೇ ನಿ.)ತಲಾ ಒಂದು ಗೋಲು ಬಾರಿಸಿದರು.
ಭಾರತ ಪಂದ್ಯ ಆರಂಭವಾದ ತಕ್ಷಣ ಪ್ರಾಬಲ್ಯ ಮೆರೆಯಿತು. ಆದರೆ, ಮೊದಲ ಕ್ವಾರ್ಟರ್‌ನಲ್ಲಿ ಗೋಲು ಬಾರಿಸಲು ವಿಫಲವಾಯಿತು. ಭಾರತ ಎರಡನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಆದರೆ, ಹರ್ಮನ್‌ಪ್ರೀತ್ ಸಿಂಗ್ ಹೊಡೆದ ಚೆಂಡು ವೈಡ್ ಆಗಿ ಗೋಲುಪೆಟ್ಟಿಗೆಗೆ ಸೇರಲಿಲ್ಲ.
ಭಾರತ 10ನೇ ನಿಮಿಷದಲ್ಲಿ ಗೋಲು ಗಳಿಸುವ ಸ್ಪಷ್ಟ ಅವಕಾಶ ಪಡೆದಿತ್ತು. ಗುರ್ಜಂತ್ ಅವರ ರಿವರ್ಸ್ ಹಿಟ್‌ನ್ನು ಜಪಾನ್ ಗೋಲ್‌ಕೀಪರ್ ತಡೆದರು. 14ನೇ ನಿಮಿಷದಲ್ಲಿ ಮನ್‌ದೀಪ್ ಸಿಂಗ್ ಅವಕಾಶ ಪಡೆದರು. ಆದರೆ, ಸಿಂಗ್ ಹೊಡೆದ ಚೆಂಡು ಕೂಡ ವೈಡ್ ಆಗಿತ್ತು. ಕೊನೆಗೂ 19ನೇ ನಿಮಿಷದಲ್ಲಿ ಗುರ್ಜಂತ್ ಭಾರತದ ಗೋಲು ಖಾತೆ ತೆರೆಯಲು ಸಫಲರಾದರು.
ಜಪಾನ್ 22ನೇ ನಿಮಿಷದಲ್ಲಿ ಗೋಲು ಬಾರಿಸಿ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿತು. ಭಾರತ 26ನೇ ನಿಮಿಷದಲ್ಲಿ ಸತತ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿದ್ದರೂ ಇದನ್ನು ಗೋಲಾಗಿ ಪರಿವರ್ತಿಸಲು ವಿಫಲವಾಯಿತು. ಜಪಾನ್ 29ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಆದರೆ, ಜಪಾನ್ ಹೊಡೆದ ಚೆಂಡು ಗುರಿ ತಲುಪಲಿಲ್ಲ. ಹಾಗಾಗಿ ಮೊದಲಾರ್ಧ 1-1ರಿಂದ ಕೊನೆಗೊಂಡಿತು.
ಮೊದಲೆರಡು ಕ್ವಾರ್ಟರ್‌ಗೆ ಹೋಲಿಸಿದರೆ ಮೂರನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳ ಆಟದಲ್ಲಿ ವೇಗವಿರಲಿಲ್ಲ. ಎರಡೂ ತಂಡಗಳು ಗೋಲು ಗಳಿಸುವ ಸ್ಪಷ್ಟ ಅವಕಾಶ ಸೃಷ್ಟಿಸಲಿಲ್ಲ. ಭಾರತ ಪಂದ್ಯದಲ್ಲಿ ನಾಲ್ಕನೇ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. 44ನೇ ನಿಮಿಷದಲ್ಲಿ ಲಭಿಸಿದ ಈ ಅವಕಾಶವನ್ನು ಗೋಲಾಗಿ ಪರಿವರ್ತಿಸಿ 2-1 ಮುನ್ನಡೆ ಪಡೆಯಿತು. ನಾಲ್ಕನೇ ಹಾಗೂ ಕೊನೆಯ ಕ್ವಾರ್ಟರ್‌ನ ಮೊದಲ 10 ನಿಮಿಷಗಳಲ್ಲಿ ಭಾರತದ ಆಟಗಾರರಿಗೆ ಜಪಾನ್‌ನ ರಕ್ಷಣಾಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ 55ನೇ ನಿಮಿಷದಲ್ಲಿ ದಿಲ್‌ಪ್ರೀತ್ ಚಾಣಾಕ್ಷತನದ ಗೋಲು ಬಾರಿಸಿ ಭಾರತದ ಮುನ್ನಡೆಯನ್ನು 3-1ಕ್ಕೆ ವಿಸ್ತರಿಸಿದರು. ದಿಲ್‌ಪ್ರೀತ್ ಜಪಾನ್‌ನ ಇಬ್ಬರು ಡಿಫೆಂಡರ್‌ಗಳನ್ನು ವಂಚಿಸಿ ಚೆಂಡನ್ನು ಗೋಲು ಪೆಟ್ಟಿಗೆಗೆ ತಲುಪಿಸಿದರು.
56ನೇ ನಿಮಿಷದಲ್ಲಿ ಜಪಾನ್ ಪಂದ್ಯದಲ್ಲಿ ಮೂರನೇ ಬಾರಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಹಿರೊಟಕಾ ಝೆಂಡಾನಾ ಯಾವುದೇ ತಪ್ಪು ಮಾಡದೇ ಚೆಂಡನ್ನು ಗುರಿ ತಲುಪಿಸಿ ಭಾರತದ ಮುನ್ನಡೆಯನ್ನು ಸ್ವಲ್ಪ ತಗ್ಗಿಸಿದರು. ಮುಂದಿನ ನಾಲ್ಕು ನಿಮಿಷಗಳ ಕಾಲ ಅಲ್ಪ ಮುನ್ನಡೆಯನ್ನು ಕಾಯ್ದುಕೊಂಡ ಭಾರತ 3-2 ಅಂತರದಿಂದ ರೋಚಕ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿತು.







