ಕೇಂದ್ರ ಸರಕಾರದಿಂದ ಜನಸಾಮಾನ್ಯರ ಸಮಸ್ಯೆ ಹೆಚ್ಚಳ: ಎಚ್.ವಿಶ್ವನಾಥ್

ಮಂಡ್ಯ, ಅ.28: ಕೇಂದ್ರದ ಬಿಜೆಪಿ ಸರಕಾರದಿಂದ ನಾಲ್ಕೂವರೆ ವರ್ಷದಲ್ಲಿ ಜನಸಾಮಾನ್ಯರ ಸಮಸ್ಯೆ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಲಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ.
ರವಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಮತ್ತು ಪ್ರಧಾನಮಂತ್ರಿ ಮೋದಿ ಬಗ್ಗೆ ವೈಯಕ್ತಿಕ ಪ್ರತಿಷ್ಠೆಯಾಗಲೀ, ದೂರುಗಳಾಗಲೀ ಇಲ್ಲ. ಆದರೆ, ಮೋದಿ ಅವರು ನಾಲ್ಕೂವರೆ ವರ್ಷದಲ್ಲಿ ಜನಸಾಮಾನ್ಯರಿಗೆ ದೊಡ್ಡ ಸಮಸ್ಯೆ ತಂದುಕೊಟ್ಟರು ಎಂದು ಕಿಡಿಕಾರಿದರು.
ರೈತರು ಮತ್ತು ಜನಸಾಮಾನ್ಯರಿಗೆ ಮೋದಿ ಸರಕಾರದಿಂದ ಯಾವ ರೀತಿಯ ಸಂಕಷ್ಟಗಳು, ಸಮಸ್ಯೆಗಳು ಎದುರಾಗಿವೆ ಎಂಬುದು ಸಾಕಷ್ಟಿವೆ. ರಸಗೊಬ್ಬರ ವಿಚಾರ ಬೇಡ, ಉಪ್ಪಿನ ದರವನ್ನೇ ತೆಗೆದುಕೊಳ್ಳಿ. ಒಂದು ಕಿಲೋ ಅಯೋಡಿನ್ ದರ 20 ರೂ. ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಜನರಿಗೆ ಉಚಿತ ಉಪ್ಪು ನೀಡಬೇಕೆಂದು ಮಹಾತ್ಮ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ನಡೆಸಿದ್ದರು. ಅಂತಹ ಮಹಾತ್ಮನ ಗುಜರಾತ್ ರಾಜ್ಯದಿಂದ ಬಂದ ನರೇಂದ್ರಮೋದಿ ಅವರು ಜನಸಾಮಾನ್ಯರಿಗೆ ಅತ್ಯಗತ್ಯವಾದ ಉಪ್ಪಿನ ದರವನ್ನೂ 20 ರೂ. ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಿಬಿಐ ಕಾಂಗ್ರೆಸ್‍ನ ಅಂಗಸಂಸ್ಥೆಯಾಗಿದೆ ಎಂದು ಆರೋಪಿಸುತ್ತಿದ್ದ ನರೇಂದ್ರಮೋದಿ ಈಗ ಅದೇ ಸಂಸ್ಥೆಗೆ ಬೀಗ ಜಡಿಯಲು ಹೊರಟಿದ್ದಾರೆ. ಸಂವಿಧಾನಾತ್ಮಕ ಸಂಸ್ಥೆಗಳ ಬಾಗಿಲು ಹಾಕಲಾಗುತ್ತಿದೆ. ದಲಿತ, ಅಲ್ಪಸಂಖ್ಯಾತ, ಹಿಂದುಳಿದವರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಕೇಂದ್ರ ಸರಕಾರದ ಯೋಜನೆಗಳು ಪ್ಲಾಪ್ ಆಗಿವೆ. ರೈತರ ಆತ್ಮಹತ್ಯೆ ಬಗ್ಗೆ ಪಾರ್ಲಿಮೆಂಟಿನಲ್ಲಿ ಚರ್ಚೆ ಆಗಲೇ ಇಲ್ಲ. ಆದರೆ, ನರೇಂದ್ರಮೋದಿ ವಿದೇಶ ಪ್ರವಾಸಕ್ಕೆ ಹೊರಡುತ್ತಾರೆ ಎಂದು ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.
ನೋಟು ಅಮಾನ್ಯೀಕರಣ ಮೂಲಕ ಸಣ್ಣ ಕೈಗಾರಿಕೆ ಹಾಗೂ ಜನಸಾಮಾನ್ಯರಿಗೆ ದೊಡ್ಡ ಹೊಡೆತ ನೀಡಲಾಗಿದೆ. ಬ್ಯಾಂಕ್‍ಗಳಿಗೆ ಕೋಟ್ಯಂತರ ರೂ. ವಂಚನೆ ಮಾಡಿದವರನ್ನು ವಿದೇಶಕ್ಕೆ ಹೋಗಲು ಅವಕಾಶ ಕೊಡಲಾಗಿದೆ. ಎಂದು ಅವರು ಆರೋಪಿಸಿದರು.
ಮಾಜಿ ಪ್ರಧಾನಿ ಡಾ.ಮನಮೋಹನ್‍ಸಿಂಗ್ ನೇತೃತ್ವದ ಯುಪಿಎ ಸರಕಾರದ ಸಂದರ್ಭದಲ್ಲಿ ಖಾಲಿ ಸಿಲಿಂಡರ್ ಹೊತ್ತುಕೊಂಡು ಪ್ರತಿಭಟನೆ ಮಾಡಿದ್ದ ಶೋಭಾ ಕರಂದ್ಲಾಜೆ, ಸದಾನಂದಗೌಡ ಈಗ ಎಲ್ಲಿಗೆ ಹೋದರು? ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ರಸಗೊಬ್ಬರ ಬೆಲೆ ಜಾಸ್ತಿಯಾದರೂ ಬಿಜೆಪಿ ನಾಯಕರು ಕೇಳುತ್ತಿಲ್ಲ, ಒಂದು ಪ್ರತಿಭಟನೆ ಮಾಡುತ್ತಿಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಇದೇನಾ ವಿಪಕ್ಷದ ಕಾರ್ಯವೈಖರಿ?
ರಾಜ್ಯದಲ್ಲಿ ಬಿಜೆಪಿ ವಿಪಕ್ಷವಾಗಿ ಸೋತಿದೆ. ತನ್ನ ಜವಾಬ್ದಾರಿಯನ್ನು ಮರೆತು ಜನತಂತ್ರ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ವಿರೋಧ ಪಕ್ಷವಾಗಿ ಸರಕಾರದ ಕಾರ್ಯವೈಖರಿ ಗಮನಿಸಬೇಕು. ಅಗತ್ಯವಿದ್ದರೆ ಸಲಹೆ ನೀಡಬೇಕು. ಅದನ್ನು ಬಿಟ್ಟು ಸರಕಾರ ಬೀಳುತ್ತೆ ಎಂದು ಪ್ರಚಾರ ಮಾಡಿಕೊಂಡು ಬರುತ್ತಿದೆ. ಇದೇನಾ ವಿರೋಧ ಪಕ್ಷದ ಕಾರ್ಯವೈಖರಿ ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ಸರಕಾರ ಜನಪರವಲ್ಲವೆಂಬುದು ಸ್ಪಷ್ಟವಾಗಿದೆ. ಇಂತಹ ಪಕ್ಷದ ಅಭ್ಯರ್ಥಿಗಳನ್ನು ಮತದಾರರು ಯಾವುದೇ ಕಾರಣಕ್ಕೂ ಬೆಂಬಲಿಸಬಾರದು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಅವರು ವಿಶ್ವನಾಥ್ ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಅಮರಾವತಿ ಚಂದ್ರಶೇಖರ್ ಸ್ಭೆರಿದಂತೆ ಹಲವು ಕಾಂಗ್ರೆಸ್ ಮುಖಂಡರು ಪ್ರಚಾರಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಮೈತ್ರಿ ಧರ್ಮಪಾಲನೆಯಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಉಪಸ್ಥಿತರಿದ್ದರು.







