ಸಮಸ್ತ ಶರೀಹತ್ ಸಮ್ಮೇಳನ: ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ

ಮಂಗಳೂರು, ಅ. 29: ಡಿಸೆಂಬರ್ 9ರಂದು ನಡೆಯಲಿರುವ ಬೃಹತ್ ಸಮಸ್ತ ಶರೀಹತ್ ಸಂರಕ್ಷಣಾ ರ‌್ಯಾಲಿ ಮತ್ತು ಸಮಾವೇಶದ ಯಶಸ್ಸಿಗಾಗಿ ರಚಿಸಲಾದ ಸ್ವಾಗತ ಸಮಿತಿಯ ನಿರ್ವಹಣೆಗಾಗಿ ಝೀನತ್ ಬಕ್ಷ್ ಮಸೀದಿಯ ಕಾಂಪೌಡ್ ಬಳಿಯಲ್ಲಿರುವ ಕಟ್ಟಡದಲ್ಲಿ ಕಚೇರಿಯನ್ನು ಆರಂಭಿಸಲಾಗಿದ್ದು ಇದನ್ನು ಜಿಲ್ಲಾ ಖಾಝಿ ಶೈಖುನಾ ತ್ವಾಕ ಉಸ್ತಾದ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಸಮ್ಮೇಳನವು ಐತಿಹಾಸಿಕ ದಾಖಲೆ ಸೃಷ್ಟಿಸಲಿದೆ ಎಂದರಲ್ಲದೆ, ಸಮ್ಮೇಳನದ ಯಶಸ್ಸಿಗಾಗಿ ಈಗಾಗಲೇ ಸಿದ್ಧತೆಗಳು ನಡೆದಿದ್ದು ಇದರಲ್ಲಿ ಸಮಸ್ತದ ಎಲ್ಲಾ ಪೋಷಕ ಸಂಘಟನೆಗಳು ಉತ್ಸಾಹದಿಂದ ಕೈ ಜೋಡಿಸಿದೆ. ಇದು ಶ್ಲಾಘನೀಯವಾಗಿದೆ ಎಂದರು.
ಸ್ವಾಗತಿಸಿ, ಪ್ರಾಸ್ತಾವನೆಗೈದು ಮಾತನಾಡಿದ ಮೌಲಾನಾ ಚೊಕ್ಕಬೆಟ್ಟು ದಾರಿಮಿ ಶರೀಹತ್ ಸಮ್ಮೇಳನದ ಯಶಸ್ಸು ಸಮಸ್ತದ ಯಶಸ್ಸಾಗಿದ್ದು ಕ್ಯಾಲಿಕಟ್ ನಲ್ಲಿ ಅದು ನಡೆದ ಐತಿಹಾಸಿಕ ಸಮ್ಮೇಳನದ ಮುಂದುವರಿದ ಭಾಗವಾಗಿ ಮಾದರಿ ಕಾರ್ಯಕ್ರಮವಾಗಿ ಮೂಡಿ ಬರಲಿದೆ ಎಂದರಲ್ಲದೆ, ಆಸ್ತಿಕರನ್ನು ಒಟ್ಟಾಗಿ ಬಾಧಿಸುವ ಶರೀಹತ್ ನಂತಹ ವಿಷಯದಲ್ಲಿ ನಮ್ಮ ಧ್ವನಿಯು ಕಾನೂನಾತ್ಮಕವಾಗಿ ಮೊಳಗಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ಕೆ ಎಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ಮಾತನಾಡಿ, ಸಮ್ಮೇಳನದ ಯಶಸ್ಸಿಗಾಗಿ ನಮ್ಮ ಎಲ್ಲಾ ಟೀಮುಗಳು ಶಕ್ತಿ ಮೀರಿ ಶ್ರಮಿಸಲಿದೆ ಎಂದರು.
ಎಸ್ಕೆ ಎಸೆಸ್ಸೆಫ್ ಕೇಂದ್ರೀಯ ಸಮಿತಿ ಕಾರ್ಯದರ್ಶಿ ಸದಕತುಲ್ಲಾ ಫೈಝಿ, ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯರಾದ ರಶೀದ್ ಹಾಜಿ ಪರ್ಲಡ್ಕ ಸಮಸ್ತ ಮದ್ರಸ ಮೇನೇಜ್ ಮೆಂಟ್ ಅಧ್ಯಕ್ಷ ಐ ಮೊಹಿದಿನಬ್ಬ ಹಾಜಿ, ಮಾಜಿ ಮೇಯರ್ ಅಶ್ರಫ್, ರಿಯಾಝುದ್ದೀನ್ ಹಾಜಿ, ವಲಯ ವಿಖಾಯ ನಾಯಕರಾದ ಮುಹಮ್ಮದ್ ಸಾಲಿಹ್, ಹನೀಫ್ ಕಲ್ಲೇಗ, ಶೈಖ್ ಹೈದರ್, ಹಮೀದ್ ಕಚ್ಮನೆ, ಝಾಕಿರ್ ಹಾಜಿ ಬಂದರ್, ನೌಶಾದ್ ಮಲಾರ್, ರಾಝಿ ಕನ್ನಂಗಾರ್, ತಮೀಮ್ ಕಡಬ, ಮುನ್ನಾ, ನೌಶಾದ್ ದೇರಳಕಟ್ಟೆ, ಬಶೀರ್ ಅಹ್ಮದ್, ಝಹೂರ್ ಅಹ್ಮದ್, ಮುಹಮ್ಮದ್ ದೇರಳಕಟ್ಟೆ ಮುಂತಾದವರು ಉಪಸ್ಥಿತರಿದ್ದರು.
ಸಮ್ಮೇಳನದ ಪೋಸ್ಟರ್ ಸ್ಪರ್ಧೆಗೆ ಖಾಝಿ ತ್ವಾಕ ಉಸ್ತಾದ್ ಚಾಲನೆ ನೀಡಿದರು. ಬುಧವಾರ ಮಧ್ಯಾಹ್ನ ಒಂದು ಗಂಟೆಯ ತನಕ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಕಚೇರಿ ಕಾರ್ಯದರ್ಶಿಯಾಗಿ ರಿಯಾಝುದ್ದೀನ್ ಹಾಜಿ ಬಂದರ್ ಮತ್ತು ಸಹಾಯಕರಾಗಿ ಝಾಕಿರ್ ಹಾಗೂ ತಮೀಮ್ ರನ್ನು ನೇಮಿಸಲಾಯಿತು.







