ಶಿವಮೊಗ್ಗ: ನಟಿ ಪೂಜಾ ಗಾಂಧಿಗೆ ಹೂ ಮಾರುವ ಮಹಿಳೆಯ ಕ್ಲಾಸ್

ಶಿವಮೊಗ್ಗ, ಅ. 29: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಸೋಮವಾರ ಚಿತ್ರನಟಿ ಪೂಜಾ ಗಾಂಧಿಯವರು ಶಿವಮೊಗ್ಗ ನಗರದಲ್ಲಿ ಪ್ರಚಾರ ನಡೆಸಿದರು. ಈ ವೇಳೆ ರಸ್ತೆ ಬದಿ ಹೂವು ಮಾರಾಟ ಮಾಡುವ ಮಹಿಳೆಯೋರ್ವರು, ಪೂಜಾ ಗಾಂಧಿಗೆ ಸಖತ್ ಕ್ಲಾಸ್ ತೆಗೆದುಕೊಂಡ ಘಟನೆಯೂ ನಡೆಯಿತು.
ಏನಾಯ್ತು?: ಗಾಂಧಿಬಜಾರ್ ರಸ್ತೆ, ಹೂವಿನ ಮಾರುಕಟ್ಟೆ ಪ್ರದೇಶದಲ್ಲಿ ಪೂಜಾಗಾಂಧಿ ಮತಯಾಚನೆ ನಡೆಸಿದರು. ಹೂವಿನ ಮಾರುಕಟ್ಟೆ ಬಳಿ ರಸ್ತೆ ಬದಿ ಹೂವು ಮಾರಾಟ ಮಾಡುವ ಮಹಿಳೆಯೋರ್ವರ ಬಳಿ ಆಗಮಿಸಿ, ಮಧು ಬಂಗಾರಪ್ಪಗೆ ಮತ ಹಾಕುವಂತೆ ಕರಪತ್ರ ನೀಡಿ ಮನವಿ ಮಾಡಿದರು.
ಈ ವೇಳೆ ಹೂವು ಮಾರಾಟ ಮಾಡುವ ಮಹಿಳೆಯು ಪೂಜಾ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡರು. ‘ನಮಗೆ ತೊಂದರೆಯಾದಾಗ ಯಾರೊಬ್ಬರು ಬರಲ್ಲ. ಇದೀಗ ಮತ ಕೇಳಲು ಆಗಮಿಸಿದ್ದಿರಾ? ನಿಮಗ್ಯಾಕೆ ಓಟ್ ಹಾಕಬೇಕು’ ಎಂದೆಲ್ಲ ಆಕ್ರೋಶದಿಂದ ಪ್ರಶ್ನಿಸಲಾರಂಭಿಸಿದರು.
ಮಹಿಳೆಯ ಆಕ್ರೋಶಕ್ಕೆ ಪೂಜಾ ಗಾಂಧಿ ಕೆಲ ಸಮಯ ತಬ್ಬಿಬ್ಬುಗೊಂಡರು. ಸಮಾಧಾನದ ಮಾತುಗಳನ್ನಾಡಲು ಮುಂದಾದರು. ಆದರೆ ಮಹಿಳೆಯ ಸಿಟ್ಟು ಮಾತ್ರ ಕಡಿಮೆಯಾಗಲಿಲ್ಲ. ‘ತಾನು ಸೇರಿದಂತೆ ಗಾಂಧಿ ಬಜಾರ್ ರಸ್ತೆಯಲ್ಲಿ ನೂರಾರು ವ್ಯಾಪಾರಸ್ಥರು ಫುಟ್ಬಾತ್ ವ್ಯಾಪಾರ ನಡೆಸಿ, ಜೀವನ ಸಾಗಿಸುತ್ತಿದ್ದೆವು. ಕಳೆದ ಮೂರು ತಿಂಗಳಿಂದ ಬಜಾರ್ ನಲ್ಲಿ ವ್ಯಾಪಾರ ಮಾಡಲು ಬಿಡುತ್ತಿಲ್ಲ. ಆಗ ಎಷ್ಟೆ ಮನವಿ ಮಾಡಿದರೂ ಯಾವೊಬ್ಬ ರಾಜಕಾರಣಿಯೂ ನಮ್ಮ ನೆರವಿಗೆ ಬರಲಿಲ್ಲ. ಈಗ ಮತ ಹಾಕುವಂತೆ ಕೇಳಲು ಬಂದಿದ್ದೀರಿ, ನಾವು ಮತ ಹಾಕಲ್ಲ’ ಎಂದು ತಿಳಿಸಿದರು. ಮಹಿಳೆಯ ಆಕ್ರೋಶದ ಮಾತುಗಳಿಂದ ತೀವ್ರ ಇರುಸುಮುರುಸುಗೊಂಡ ಪೂಜಾಗಾಂಧಿಯವರು, ಪಕ್ಕದ ಅಂಗಡಿಯತ್ತ ಮತಯಾಚನೆಗೆ ಹೆಜ್ಜೆ ಹಾಕಿದರು.
ಮೀಟೂ ಅಭಿಯಾನ: ಉತ್ತಮ ಬೆಳವಣಿಗೆ
‘ಇದೊಂದು ಉತ್ತಮ ಬೆಳವಣಿಗೆಯಾಗಿದೆ. ಮಹಿಳೆಯರು ತಮಗಾದ ನೋವನ್ನು ಹೇಳಿಕೊಳ್ಳಲು ವೇದಿಕೆ ಸಿಕ್ಕಿದೆ. ಮಹಿಳೆಯರಿಗೆ ಏನೇ ತೊಂದರೆ ಆದರೂ ಅದನ್ನು ಎದುರಿಸಬೇಕು. ನಾನು ಮೀಟೂ ಆರೋಪಗಳ ಬಗ್ಗೆ ಮಾತನಾಡುವುದಿಲ್ಲ. ಆದರೆ ತಮ್ಮ ನೋವನ್ನು ತೋಡಿಕೊಂಡವರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.







