ಪತ್ನಿ, ಮಕ್ಕಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕುಂದಾಪುರ ಎಸಿಗೆ ದೂರು
ಕುಂದಾಪುರ, ಅ.29: ಪತ್ನಿ ಹಾಗೂ ಇಬ್ಬರು ಮಕ್ಕಳು, ಪೊಲೀಸ್ ಸಿಬ್ಬಂದಿ ಜೊತೆ ಸೇರಿಕೊಂಡು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ, ಮನೆಯಿಂದ ಹೊರ ಹಾಕಿರುವ ಬಗ್ಗೆ ಕೋಣಿಯ ಎಚ್‌ಎಂಟಿ ನಿವಾಸಿ ಮಾರ್ಕೊ ಡಿಕೋಸ್ತ (62) ಎಂಬವರು ಹಿರಿಯ ನಾಗರಿಕರ ರಕ್ಷಣಾ ಕಾಯಿದೆಯ ಟ್ರಿಬೂನಲ್ ಅಧ್ಯಕ್ಷರಾಗಿರುವ ಕುಂದಾಪುರದ ಸಹಾಯಕ ಆಯುಕ್ತ ಭೂಬಾಲ್ ಅವರಿಗೆ ದೂರು ನೀಡಿದ್ದಾರೆ.
ರೋಮನ್ ಕೆಥೋಲಿಕ್‌ಗೆ ಸೇರಿದ ನಾನು 24 ವರ್ಷಗಳ ಹಿಂದೆ ಸಿಸಿಲಿಯಾ ಡಿಸೋಜ ಎಂಬವರೊಂದಿಗೆ ವಿವಾಹವಾಗಿದ್ದು, 2016ರಲ್ಲಿ ಸಿಸಿಲಿಯಾ ಹಾಗೂ ಪುತ್ರರಾದ ಮೆಕಲ್ ಡಿಕೋಸ್ತ ಮತ್ತು ಮಿಲ್ಟನ್ ಡಿಕೋಸ್ತ ನ್ಯೂ ಲೈಫ್ ಗೆ ಮತಾಂತರಗೊಂಡಿದ್ದಾರೆ. ಈ ವಿಚಾರವಾಗಿ ಮನೆಯಲ್ಲಿ ಜಗಳ ಆಗುತ್ತಿತ್ತು. ಇದನ್ನೇ ನೆಪವಾಗಿಟ್ಟುಕೊಂಡು ಪತ್ನಿ, ಕುಂದಾಪುರ ಠಾಣೆಯ ಪೊಲೀಸ್ ಸಿಬಂದಿ ಜೋಸೆಫ್ ಡಿಸೋಜಾ ಜತೆ ಸೇರಿಕೊಂಡು ತನ್ನ ವಿರುದ್ಧ ವರದಕ್ಷಿಣೆ ಕಿರುಕುಳ ಎಂಬ ಸುಳ್ಳು ಕೇಸು ದಾಖಲಿಸಿ ಜೈಲಿಗೆ ಕಳುಹಿಸಿದ್ದರು. ನಂತರ ನನ್ನ ಕೊಲೆಯತ್ನ ಕೂಡ ನಡೆದಿತ್ತು. ಬಿಡುಗಡೆಗೊಂಡ ಬಳಿಕ ನನ್ನನ್ನು ಸ್ವಂತ ಮನೆಯಿಂದಲೇ ಹೊರಹಾಕಿದ್ದಾರೆ ಎಂದು ಮಾರ್ಕೊ ಡಿಕೋಸ್ತ ದೂರಿನಲ್ಲಿ ತಿಳಿಸಿದ್ದಾರೆ.
ನನ್ನ ವಿರುದ್ಧ ಪಿತೂರಿ ನಡೆಸಲು ಅಧಿಕಾರ ದುರ್ಬಳಕೆ ಮಾಡಿಕೊಂಡ ಪೊಲೀಸ್ ಸಿಬ್ಬಂದಿ ಜೋಸೆಫ್ ಡಿಸೋಜ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಕೆಲಸದಿಂದ ವಜಾನಗೊಳಿಸಬೇಕು. ಪತ್ನಿ, ಮಕ್ಕಳ ವಿರುದ್ಧವೂ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಒತ್ತಾಯ ಮಾಡಿ ಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಮಾರ್ಕೊ ಡಿಕೋಸ್ತ, ರಾಧಾದಾಸ್ ನೇತೃತ್ವದ ಕುಂದಾಪುರದ ಮಹಿಳಾ ಸಾಂತ್ವನ ಕೇಂದ್ರದ ಮೂಲಕ ಈಗಾಗಲೇ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಗೂ ಮಂಗಳೂರು ಪಶ್ಚಿಮ ವಲಯ ಐಜಿಪಿ ಯವರಿಗೆ ದೂರು ನೀಡಿದ್ದಾರೆ.







