ಎಟಿಪಿ ರ‍್ಯಾಂಕಿಂಗ್: ಆ್ಯಂಡರ್ಸನ್ ಗೆ 6ನೇ ಸ್ಥಾನ

ಪ್ಯಾರಿಸ್, ಅ.29: ದಕ್ಷಿಣ ಆಫ್ರಿಕದ ಕೆವಿನ್ ಆ್ಯಂಡರ್ಸನ್ ಸೋಮವಾರ ಬಿಡುಗಡೆಯಾಗಿರುವ ಎಟಿಪಿ ರ‍್ಯಾಂಕಿಂಗ್ನಲ್ಲಿ ಎರಡು ಸ್ಥಾನ ಭಡ್ತಿ ಪಡೆದು ಆರನೇ ಸ್ಥಾನಕ್ಕೇರಿದ್ದಾರೆ. ರವಿವಾರ ವಿಯೆನ್ನಾದಲ್ಲಿ ಜಪಾನ್‌ನ ಕಿ ನಿಶಿಕೊರಿ ಅವರನ್ನು ಸೋಲಿಸಿ ಪ್ರಶಸ್ತಿ ಜಯಿಸಿರುವ 32ರ ಹರೆಯದ ಆ್ಯಂಡರ್ಸನ್ ಎರಡು ದಶಕಗಳ ಬಳಿಕ ವರ್ಷಾಂತ್ಯದಲ್ಲಿ ನಡೆಯುವ ಟೂರ್ ಫೈನಲ್ಸ್‌ಗೆ ಆಡಲು ಅರ್ಹತೆ ಪಡೆದಿರುವ ದಕ್ಷಿಣ ಆಫ್ರಿಕದ ಮೊದಲ ಸಿಂಗಲ್ಸ್ ಆಟಗಾರನಾಗಿದ್ದಾರೆ.
ನ್ಯೂಯಾರ್ಕ್‌ನಲ್ಲಿ ಸೆಮಿಫೈನಲ್‌ನಲ್ಲಿ ನಿರ್ಗಮಿಸಿದ ಬಳಿಕ ಸ್ಪೇನ್ ಆಟಗಾರ ನಡಾಲ್ ಸಕ್ರಿಯ ಟೆನಿಸ್‌ಗೆ ವಾಪಸಾಗಲು ತಯಾರಾಗಿದ್ದಾರೆ. ಬಾಸೆಲ್‌ನಲ್ಲಿ 99ನೇ ಎಟಿಪಿ ಪ್ರಶಸ್ತಿ ಜಯಿಸಿರುವ ರೋಜರ್ ಫೆಡರರ್ ಮೂರನೇ ಸ್ಥಾನ ಉಳಿಸಿಕೊಂಡಿದ್ದಾರೆ. ಫೆಡರರ್‌ಗೆ ಸೋತಿದ್ದ ರೊಮಾನಿಯದ ಮರಿಯಸ್ ಕೊಪಿಲ್ ಜೀವನಶ್ರೇಷ್ಠ 60ನೇ ರ‍್ಯಾಂಕಿಂಗ್ ತಲುಪಿದ್ದಾರೆ.
ಎಟಿಪಿ ರ್ಯಾಂಕಿಂಗ್ ಟಾಪ್-10: 1. ರಫೆಲ್ ನಡಾಲ್(ಸ್ಪೇನ್), 2.ನೊವಾಕ್ ಜೊಕೊವಿಕ್(ಸರ್ಬಿಯ), 3. ರೋಜರ್ ಫೆಡರರ್(ಸ್ವಿಸ್), 4. ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊ(ಅರ್ಜೆಂಟೀನ), 5. ಅಲೆಕ್ಸಾಂಡರ್ ಝ್ವೆರೆವ್(ಜರ್ಮನಿ), 6. ಕೆವಿನ್ ಆ್ಯಂಡರ್ಸನ್(ದ.ಆಫ್ರಿಕ), 7. ಮರಿನ್ ಸಿಲಿಕ್(ಕ್ರೊಯೇಶಿಯ),8. ಡೊಮಿನಿಕ್ ಥೀಮ್(ಆಸ್ಟ್ರೀಯ), 9. ಜಾನ್ ಇಸ್ನೆರ್(ಅಮೆರಿಕ), 10.ಗ್ರಿಗೊರ್ ಡಿಮಿಟ್ರೊವ್(ಬಲ್ಗೇರಿಯ).
ಶರಣ್ ಭಾರತದ ನಂ.1 ಡಬಲ್ಸ್ ಆಟಗಾರ
ಎಟಿಪಿ ರ‍್ಯಾಂಕಿಂಗ್ನಲ್ಲಿ ಹಿರಿಯ ಆಟಗಾರ ರೋಹನ್ ಬೋಪಣ್ಣ ರನ್ನು ಹಿಂದಿಕ್ಕಿದ ದಿವಿಜ್ ಶರಣ್ ಭಾರತದ ನಂ.1 ಡಬಲ್ಸ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಸೋಮವಾರ ಬಿಡುಗಡೆಯಾದ ರ‍್ಯಾಂಕಿಂಗ್ ನಲ್ಲಿ ಶರಣ್ ಎಟಿಪಿ ರ್ಯಾಂಕಿಂಗ್‌ನಲ್ಲಿ 38ನೇ ಸ್ಥಾನ ತಲುಪಿದ್ದಾರೆ. ಡಬಲ್ಸ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಎಡಗೈ ಆಟಗಾರ ಶರಣ್ ತನ್ನ ವೃತ್ತಿಜೀವನದಲ್ಲಿ ಮೊದಲ ಬಾರಿ ಭಾರತದ ನಂ.1 ಆಟಗಾರನಾಗಿದ್ದಾರೆ. ಬೋಪಣ್ಣ 9 ಸ್ಥಾನ ಕಳೆದುಕೊಂಡು 39ನೇ ಸ್ಥಾನದಲ್ಲೂ, ಲಿಯಾಂಡರ್ ಪೇಸ್ 2 ಸ್ಥಾನ ಕಳೆೆದುಕೊಂಡು 60ನೇ ಸ್ಥಾನದಲ್ಲಿದ್ದಾರೆ. ಜೀವನ್ 3 ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 72ನೇ ಸ್ಥಾನಕ್ಕೇರಿದ್ದಾರೆ.
►ಸ್ವಿಟೋಲಿನಾಗೆ ನಾಲ್ಕನೇ ಸ್ಥಾನ: ಮಹಿಳೆಯರ ವಿಶ್ವ ರ‍್ಯಾಂಕಿಂಗ್ನಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಮೂರು ಸ್ಥಾನ ಭಡ್ತಿ ಪಡೆದು ನಾಲ್ಕನೇ ಸ್ಥಾನ ತಲುಪಿದ್ದಾರೆ.
ಸಿಮೊನಾ ಹಾಲೆಪ್ ಬೆನ್ನುನೋವಿನಿಂದಾಗಿ ಟೂರ್ನಿಯಿಂದ ದೂರ ಉಳಿದಿದ್ದರೂ ವರ್ಷಾಂತ್ಯದಲ್ಲಿ ನಂ.1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಪೆಟ್ರಾ ಕ್ವಿಟೋವಾ 2 ಸ್ಥಾನ ಕಳೆದುಕೊಂಡು 7ನೇ ಸ್ಥಾನಕ್ಕೆ ಕುಸಿದಿದ್ದಾರೆ.







