ಸಿಬಿಐ ಡಿಎಸ್‌ಪಿ ಕುಮಾರ್,ಮಧ್ಯವರ್ತಿಗೆ ಏಳು ದಿನಗಳ ನ್ಯಾಯಾಂಗ ಬಂಧನ

ಹೊಸದಿಲ್ಲಿ,ಅ.30: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಅವರ ಹೆಸರು ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ತನಿಖಾ ಸಂಸ್ಥೆಯ ಡಿಎಸ್‌ಪಿ ದೇವೇಂದ್ರ ಕುಮಾರ್ ಮತ್ತು ಮಧ್ಯವರ್ತಿ ಮನೋಜ್ ಪ್ರಸಾದ್ ಅವರಿಗೆ ದಿಲ್ಲಿಯ ವಿಶೇಷ ಸಿಬಿಐ ನ್ಯಾಯಾಲಯವು ಮಂಗಳವಾರ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ. ಏಳು ದಿನಗಳ ಸಿಬಿಐ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ತನ್ನ ವಿರುದ್ಧದ ಪ್ರಕರಣದಲ್ಲಿ ಸಿಬಿಐ ಸಾಕ್ಷಾಧಾರಗಳನ್ನು ತಿರುಚುತ್ತಿದೆ ಮತ್ತು ಸುಳ್ಳುಸಾಕ್ಷಿಗಳನ್ನು ಸೃಷ್ಟಿಸುತ್ತಿದೆ ಎಂದು ವಿಚಾರಣೆ ವೇಳೆ ಆರೋಪಿಸಿದ ಕುಮಾರ್,ತನಿಖಾಧಿಕಾರಿಗಳ ವಿರುದ್ಧ ಕಳ್ಳತನ ಮತ್ತು ಹಫ್ತಾ ವಸೂಲಿ ಪ್ರಕರಣವನ್ನು ದಾಖಲಿಸುವಂತೆ ಕೋರಿದರು.
ಜಾಮೀನು ಕೋರಿ ಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ವಿಶೇಷ ಸಿಬಿಐ ನ್ಯಾಯಾಧೀಶ ಸಂತೋಷ ಸ್ನೇಹಿ ಮಾನ್ ಅವರು ಬುಧವಾರ ನಡೆಸಲಿದ್ದು,ಈ ಅರ್ಜಿಗೆ ಉತ್ತರ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದರು.
ತನ್ನ ಬಂಧನವನ್ನು ‘ಅಕ್ರಮ’ಎಂದು ಜಾಮೀನು ಅರ್ಜಿಯಲ್ಲಿ ಬಣ್ಣಿಸಿರುವ ಕುಮಾರ್,ತನ್ನನ್ನು ಬಿಡುಗಡೆಗೊಳಿಸುವಂತೆ ನ್ಯಾಯಾಲಯವನ್ನು ಆಗ್ರಹಿಸಿದರು.ಇಬ್ಬರು ಮಧ್ಯವರ್ತಿಗಳಾದ ಮನೋಜ್ ಪ್ರಸಾದ್ ಮತ್ತು ಸೋಮೇಶ ಪ್ರಸಾದ ಅವರನ್ನೂ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ.
ಉದ್ಯಮಿ ಸತೀಶ ಸನಾ ಅವರು ಅ.15ರಂದು ಸಲ್ಲಿಸಿದ್ದ ದೂರಿನಲ್ಲಿ,ಮಾಂಸ ರಫ್ತು ವ್ಯಾಪಾರಿ ಮೊಯಿನ್ ಕುರೇಶಿ ವಿರುದ್ಧದ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಕುಮಾರ್ ತನ್ನನ್ನು ಪದೇಪದೇ ಸಿಬಿಐ ಕಚೇರಿಗೆ ಕರೆಸಿಕೊಂಡು ಕಿರುಕುಳ ನೀಡುತ್ತಿದ್ದರು ಮತ್ತು ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಲು ಐದು ಕೋ.ರೂ.ಲಂಚಕ್ಕೆ ಆಗ್ರಹಿಸಿದ್ದರು ಎಂದು ಆಪಾದಿಸಿದ್ದಾರೆ. ಸನಾ ಭಾಗಶಃ ಲಂಚವನ್ನು ನೀಡಿದ್ದರು.







