ನಾನು ದಲಿತನೆಂದು ನನ್ನನ್ನು ಗುರಿಯಾಗಿಸಿಕೊಳ್ಳಲಾಗಿದೆ: ಪಂಜಾಬ್ ಸಚಿವ ಚನ್ನಿ

ಚಂಡಿಗಡ,ಅ.30: ಮಹಿಳಾ ಅಧಿಕಾರಿಯೋರ್ವರಿಗೆ ಅಸಭ್ಯ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ತನ್ನನ್ನು ವಜಾಗೊಳಿಸಬೇಕೆಂದು ಪ್ರತಿಪಕ್ಷಗಳು ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್ ಸಚಿವ ಚರಣಜಿತ್ ಸಿಂಗ್ ಚನ್ನಿ ಅವರು,ತಾನು ರಾಜ್ಯದಲ್ಲಿಯ ದಲಿತರಿಗೆ ಸಂಬಂಧಿಸಿದ ವಿಷಯಗಳನ್ನು ಎತ್ತಿರುವುದರಿಂದ ತನ್ನನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ ಎಂದು ಮಂಗಳವಾರ ಇಲ್ಲಿ ತಿಳಿಸಿದರು. ಮಹಿಳಾ ಅಧಿಕಾರಿ ಕೆಲವು ವಾರಗಳ ಹಿಂದೆ ಚನ್ನಿ ವಿರುದ್ಧ ಈ ಆರೋಪವನ್ನು ಮಾಡಿದ್ದರು.
ವಿದೇಶ ಪ್ರಯಾಣದಿಂದ ಮರಳಿದ ಬಳಿಕ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಚನ್ನಿ,ತಪ್ಪಿನಿಂದಾಗಿ ತಾನು ಮಹಿಳೆಗೆ ಸಂದೇಶವನ್ನು ರವಾನಿಸಿದ್ದೆ. ತಾನು ಸದಾ ಮಹಿಳೆಯರನ್ನು ಗೌರವಿಸುತ್ತೇನೆ ಎಂದು ಹೇಳಿದರು. ಮಹಿಳಾ ಅಧಿಕಾರಿ ತನ್ನ ಕ್ಷಮಾಯಾಚನೆಯನ್ನು ಒಪ್ಪಿಕೊಂಡಿದ್ದಾರೆ ಮತ್ತು ಅಲ್ಲಿಗೆ ಆ ವಿಷಯವು ಮುಗಿದಿದೆ ಎಂದ ಅವರು,ತಾನು ದಲಿತನಾಗಿರುವುದರಿಂದ ಶಿರೋಮಣಿ ಅಕಾಲಿ ದಳ(ಎಸ್‌ಎಡಿ)ವು ತನ್ನನ್ನು ಗುರಿಯಾಗಿಸಿಕೊಂಡಿದೆ ಎಂದರು.
ಈ ಬಗ್ಗೆ ತಾನು ಈಗಾಗಲೇ ಮುಖ್ಯಮಂತ್ರಿಗಳಿಗೆ ಸ್ಪಷ್ಟನೆಯನ್ನು ನೀಡಿದ್ದೇನೆ ಮತ್ತು ಅವರು ಅದಕ್ಕೆ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದರು. ತನ್ಮಧ್ಯೆ ಚನ್ನಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂಬ ತನ್ನ ಬೇಡಿಕೆಯನ್ನು ಎಸ್‌ಎಡಿ ಪುನರುಚ್ಚರಿಸಿದೆ.





