ಮುಂದಿನ ಚುನಾವಣೆಯಲ್ಲಿ ಶಿವಸೇನೆ ಜೊತೆಗೆ ಮೈತ್ರಿಯ ಅಗತ್ಯವಿದೆ: ಬಿಜೆಪಿ

ನಾಗ್‌ಪುರ, ಅ.30: ಮುಂದಿನ ಚುನಾವಣೆಯಲ್ಲಿ ಮತಗಳ ವಿಭಜನೆ ತಪ್ಪಿಸುವ ನಿಟ್ಟಿನಲ್ಲಿ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಬಯಸುತ್ತಿದೆ ಎಂದು ಬಿಜೆಪಿಯ ಮಹಾರಾಷ್ಟ್ರ ರಾಜ್ಯಾಧ್ಯಕ್ಷ ರಾವ್‌ಸಾಹೇಬ್ ದಾನ್ವೆ ಹೇಳಿದ್ದಾರೆ. ರಾಜ್ಯದಲ್ಲಿ ಈ ಹಿಂದೆ ಮೈತ್ರಿಕೂಟ ರಚಿಸಿಕೊಂಡಿದ್ದ ಈ ಎರಡೂ ಪಕ್ಷಗಳ ಮಧ್ಯೆ ವೈಮನಸ್ಸು ಸ್ಫೋಟಗೊಂಡ ಕಾರಣ ಮೈತ್ರಿ ಮುರಿದುಬಿದ್ದಿತ್ತು. ಇದೀಗ ಮತ್ತೆ ಮೈತ್ರಿಯ ಪ್ರಸ್ತಾಪ ಮಾಡಿರುವ ದಾನ್ವೆ, ಬಿಜೆಪಿ ಮುಖಂಡ ಪ್ರಮೋದ್ ಮಹಾಜನ್ ಹಾಗೂ ಶಿವಸೇನೆಯ ಮುಖಂಡ ಬಾಳ್ ಠಾಕ್ರೆ(ಇಬ್ಬರೂ ಮೃತರಾಗಿದ್ದಾರೆ) ಸಮ್ಮತಿಸಿದ್ದ ಸೂತ್ರದ ಪ್ರಕಾರ ಎರಡೂ ಪಕ್ಷಗಳೊಳಗೆ ಮೈತ್ರಿ ಸಾಧ್ಯವಿದೆ. ಶಿವಸೇನೆ ನಮ್ಮ ಹಳೆಯ ಮಿತ್ರಪಕ್ಷವಾಗಿದೆ ಎಂದರು. ಎರಡೂ ಪಕ್ಷಗಳ ನಡುವಿನ ಸೀಟು ಹಂಚಿಕೆಯ ಬಗ್ಗೆ ಈಗಲೇ ಹೇಳುವಂತಿಲ್ಲ. ಮಾತುಕತೆಯ ಬಳಿಕ ಇದು ಅಂತಿಮಗೊಳ್ಳಲಿದೆ ಎಂದು ದಾನ್ವೆ ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಮೈತ್ರಿಗೆ ಮುಂದಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಅಸಹಾಯಕವಾಗಿಲ್ಲ ಬಲಿಷ್ಟವಾಗಿದೆ. ಆದರೆ ವಾಜಪೇಯಿಯವರ ಕಾಲದಿಂದಲೂ ಬಿಜೆಪಿ ಮೈತ್ರಿಕೂಟ ರಚಿಸಿಕೊಂಡು ಸರಕಾರ ರಚಿಸುವ ಕ್ರಮ ಅನುಸರಿಸುತ್ತಿದ್ದು ಮಿತ್ರ ಪಕ್ಷಗಳನ್ನು ಜೊತೆಯಾಗಿರಿಸಿಕೊಳ್ಳುವುದು ಇದರ ಉದ್ದೇಶವಾಗಿದೆ ಎಂದರು. ಮುಂದಿನ ಚುನಾವಣೆಯಲ್ಲಿ ಅಭಿವೃದ್ಧಿ ಕಾರ್ಯದ ವಿಷಯ ಬಿಜೆಪಿಯ ಅಜೆಂಡಾವಾಗಿರುತ್ತದೆ. ಆದರೆ ರಾಮಮಂದಿರ ವಿಷಯವನ್ನೂ ಪಕ್ಷ ಕೈಬಿಡುವುದಿಲ್ಲ ಎಂದವರು ಸ್ಪಷ್ಟಪಡಿಸಿದರು. 2019ರ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ ಜೊತೆ ಮೈತ್ರಿ ಮಾಡಿಕೊಳ್ಳುವ ಆಶಾವಾದವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ರಾಜ್ಯದ ವಿತ್ತ ಸಚಿವ ಸುಧೀರ್ ಮುಂಗಾಟಿವರ್ ವ್ಯಕ್ತಪಡಿಸಿದ್ದರು. ಅಲ್ಲದೆ ಜೂನ್‌ನಲ್ಲಿ ಮುಂಬೈಗೆ ಆಗಮಿಸಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆಯನ್ನು ಭೇಟಿಯಾಗಿದ್ದರು. 2014ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹೊರತುಪಡಿಸಿ ಎಲ್ಲಾ ಚುನಾವಣೆಯಲ್ಲೂ ಉಭಯ ಪಕ್ಷಗಳು ಜತೆಗೂಡಿಯೇ ಸ್ಪರ್ಧಿಸಿವೆ. 2014ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 288ರಲ್ಲಿ 122 ಸ್ಥಾನದಲ್ಲಿ ಗೆದ್ದಿದ್ದರೆ ಸೇನೆ 62ರಲ್ಲಿ ಜಯ ಸಾಧಿಸಿತ್ತು. ಅದೇ ವರ್ಷ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ 48 ಸ್ಥಾನಗಳಲ್ಲಿ ಬಿಜೆಪಿ 23, ಸೇನೆ 18 ಸ್ಥಾನ ಪಡೆದಿದೆ.







