ಬಳ್ಳಾರಿಯಲ್ಲಿ ಕಾಂಗ್ರೆಸ್ ಬಂಡಾಯ ಶಮನ: ಸಚಿವ ರಮೇಶ್ ಜಾರಕಿಹೊಳಿ

ಬೆಂಗಳೂರು, ಅ.30: ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಪೂರಕವಾದ ವಾತಾವರಣವಿದೆ. ನನಗೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವಹಿಸಲಾಗಿತ್ತು. ನಾನು ಅಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುವ ಮೂಲಕ ಸ್ಥಳೀಯವಾಗಿ ಇದ್ದ ಬಂಡಾಯವನ್ನು ಶಮನ ಮಾಡಿದ್ದೇನೆ ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿರುವ ತಮ್ಮ ಸರಕಾರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಹೀಗಾಗಿ ನಾನೇ ಕೆಪಿಸಿಸಿ ಅಧ್ಯಕ್ಷರನ್ನು ಕೇಳಿ ಜಮಖಂಡಿ ಉಸ್ತುವಾರಿಯನ್ನು ಪಡೆದಿದ್ದೇನೆ ಎಂದರು.
ಕಳೆದ ನಾಲ್ಕು ದಿನಗಳಿಂದ ಆರೋಗ್ಯ ಸಮಸ್ಯೆಯಿತ್ತು. ಹೀಗಾಗಿ, ಚುನಾವಣಾ ಪ್ರಚಾರಕ್ಕೆ ಹೋಗಿರಲಿಲ್ಲ. ಇವತ್ತು ಜಮಖಂಡಿಗೆ ತೆರಳುತ್ತಿದ್ದು, ಇನ್ನುಳಿದ ಎರಡು ಮೂರು ದಿನ ಅಲ್ಲೇ ಇದ್ದು ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ. ಬಳ್ಳಾರಿಯಲ್ಲಿ ಸಹೋದರ ಶಾಸಕ ಸತೀಶ್ ಜಾರಕಿಹೊಳಿ ಇದ್ದಾರೆ. ಆದುದರಿಂದ, ನಾನು ಅಲ್ಲಿಗೆ ಹೋಗಿಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಜೊತೆಗಿನ ಮುನಿಸು ವೈಯಕ್ತಿಕವಾದದ್ದು. ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅದನ್ನು ನಮ್ಮ ಹೈಕಮಾಂಡ್ ನೋಡಿಕೊಳ್ಳುತ್ತದೆ. ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಶಿವಕುಮಾರ್ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಉತ್ತಮ ವಾತಾವರಣ ಅಲ್ಲಿದೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ನಾನು ಬಿಜೆಪಿಗೆ ಹೋಗುತ್ತೇನೆ ಅನ್ನೋದು ಸುಳ್ಳು. ಈ ಹಿಂದಿನ ಎಲ್ಲ ಗೊಂದಲಗಳು ಮುಗಿದ ಅಧ್ಯಾಯ. ನಮ್ಮಲ್ಲಿ ಸಿಟ್ಟು, ಅಸಮಾಧಾನ ಇದ್ದದ್ದು ನಿಜ. ಸಿದ್ದರಾಮಯ್ಯ ವಿದೇಶದಿಂದ ಬಂದು ಎಲ್ಲವನ್ನು ಸರಿಪಡಿಸುವ ಕೆಲಸ ಮಾಡಿದ್ದಾರೆ. ಅವರ ಬಳಿ ನಮ್ಮ ನೋವನ್ನು ತೋಡಿಕೊಂಡಿದ್ದೇವೆ. ಅವರ ಮಾತಿಗೆ ಬೆಲೆ ಕೊಟ್ಟು ಸಮಾಧಾನದಿಂದ ಇದ್ದೇವೆ. ನಮ್ಮ ಎಲ್ಲ ಸಮಸ್ಯೆಗಳು ಶೀಘ್ರವೆ ಪರಿಹಾರ ಆಗುತ್ತವೆ ಎಂದು ಅವರು ಹೇಳಿದರು.
ವಾಲ್ಮೀಕಿ ಸಮುದಾಯವನ್ನು ಒಡೆಯಲು ಉಗ್ರಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಬಳ್ಳಾರಿಯು ಮೀಸಲು ಕ್ಷೇತ್ರ. ಹೀಗಾಗಿ ವಾಲ್ಮೀಕಿ ಜನಾಂಗದವರೇ ನಿಲ್ಲಬೇಕು. ಯಾರನ್ನು ಗೆಲ್ಲಿಸಬೇಕೆಂದು ಶ್ರೀರಾಮುಲು ನಿರ್ಧರಿಸುವುದಲ್ಲ, ಅದನ್ನು ಬಳ್ಳಾರಿಯ ಜನ ನಿರ್ಧರಿಸುತ್ತಾರೆ ಎಂದು ಮಾರ್ಮಿಕವಾಗಿ ತಿರುಗೇಟು ನೀಡಿದರು.
ಸಚಿವ ಸಂಪುಟ ಸಭೆಗಳಿಗೆ ನಿರಂತರವಾಗಿ ಗೈರು ಹಾಜರಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಅನೇಕ ಸಮಸ್ಯೆಗಳಿವೆ. ಅವುಗಳನ್ನೆಲ್ಲ ಮಾಧ್ಯಮಗಳ ಎದುರು ಹೇಳುವುದಕ್ಕೆ ಆಗುವುದಿಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಾನು ಪಾಲ್ಗೊಳ್ಳುತ್ತೇನೆ ಎಂದರು.
ಶಾಸಕ ನಾಗೇಂದ್ರ ಅವರ ಸಹೋದರ ವೆಂಕಟೇಶ್ ಪ್ರಸಾದ್‌ಗೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ನಾವು ಕೇಳಿದ್ದೆವು. ಆದರೆ, ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಉಗ್ರಪ್ಪನವರಿಗೆ ಟಿಕೆಟ್ ನೀಡಿತು. ಅವರೊಬ್ಬ ಉತ್ತಮ ನಾಯಕರು. ಅವರು ಸಂಸದರಾಗಬೇಕೆಂಬುದು ನನ್ನ ಕನಸು ಆಗಿತ್ತು ಎಂದು ರಮೇಶ್ ಜಾರಕಿಹೊಳಿ ಹೇಳಿದರು.







