ಬಡಗಬೆಳ್ಳೂರು: ನಾಲೆ ನಿರ್ಮಾಣ ಕಾಮಗಾರಿ ಕಳಪೆ-ಆರೋಪ
ಲೋಕಾಯುಕ್ತ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಬಂಟ್ವಾಳ, ಅ. 30: ಬಡಗಬೆಳ್ಳೂರು ಸಮೀಪದ ಕಟ್ಟೆ ಅಂಗಡಿ ಪ್ರದೇಶದಲ್ಲಿ ಮಂಗಳೂರು ಯುನೈಟೆಡ್ ಬ್ರಿವರೀಸ್ ಕಂಪೆನಿ ವತಿಯಿಂದ ಗದ್ದೆ ಬದಿ ನಿರ್ಮಿಸಲಾದ ನಾಲೆ ಕಾಮಗಾರಿ ವಿರುದ್ಧ ರೈತರು ನೀಡಿದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಲೋಕಾಯುಕ್ತ ಅಧಿಕಾರಿ ಮತ್ತು ಕಂದಾಯ ಇಲಾಖೆ ಅಧಿಕಾರಿ ಗಳು ಸೋಮವಾರ ಸಂಜೆ ಭೇಟಿ ನೀಡಿ ಪರಶೀಲನೆ ನಡೆಸಿ, ಬಳಿಕ ಸಂತ್ರಸ್ತ ರೈತರೊಂದಿಗೆ ಮಾತುಕತೆ ನಡೆಸಿದರು.
ಇಲ್ಲಿನ ಬಡಗಬೆಳ್ಳೂರು ಮತ್ತು ತೆಂಕಬೆಳ್ಳೂರು ಗ್ರಾಮಗಳ ನಡುವೆ ಸಮೀಪದ ಕಟ್ಟೆ ಅಂಗಡಿ ಎಂಬಲ್ಲಿ ಗದ್ದೆ ಬದಿ ಮಂಗಳೂರು ಯುನೈಟೆಡ್ ಬ್ರಿವರೀಸ್ (ಯುಬಿ)ಲಿಮಿಟೆಡ್ ಕಂಪೆನಿ ವತಿಯಿಂದ ಗದ್ದೆ ಬದಿ ನಿರ್ಮಿಸಲಾದ ನಾಲೆ ಕಾಮಗಾರಿ ಕಳೆದ ವರ್ಷ ಉದ್ಘಾಟನೆಗೊಂಡಿತ್ತು. ಆರಂಭದಲ್ಲಿ ರೈತರಿಗೆ ನೀರಿಂಗಿಸುವ ನೆಪದಲ್ಲಿ 2ಕೋಟಿ ರೂ. ವೆಚ್ಚದಲ್ಲಿ ಒಟ್ಟು 600 ಮೀ. ನಾಲೆ ನಿರ್ಮಿಸಿ ಕೊಡುವುದಾಗಿ ಕಂಪೆನಿ ಭರವಸೆ ನೀಡಿತ್ತು. ಆದರೆ, ಗದ್ದೆ ಬದಿ ಇರುವ ತೋಡಿನ ಮಣ್ಣು ಮತ್ತು ಮರಳು ತೆಗೆದು ಮಾರಾಟ ಮಾಡಿದ್ದಲ್ಲದೆ, ಗದ್ದೆಗೆ ಮಣ್ಣು ಹಾಕಿ ಸುಮಾರು 100 ಎಕರೆ ಕೃಷಿಭೂಮಿಗೆ ಹಾನಿ ಉಂಟು ಮಾಡಿದ್ದಾರೆ ಎಂದು ಸಂತ್ರಸ್ತ ರೈತರು ಆರೋಪಿಸಿದ್ದರು.
ಕೇವಲ 300ಮೀ. ಉದ್ದಕ್ಕೆ ಮಾತ್ರ ನಾಲೆ ನಿರ್ಮಿಸಿ ಎರಡೂ ಬದಿ ಟೈಲ್ಸ್ ಮಾದರಿ ಕಲ್ಲು ಅಳವಡಿಸಿದ್ದಾರೆ. ಈ ಕಳಪೆ ಕಾಮಗಾರಿಯಲ್ಲಿ ಭಾರೀ ಅವ್ಯ ವಹಾರ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಇಲ್ಲಿನ ರೈತ ಮುಖಂಡರಾದ ಉಮೇಶ ಶೆಟ್ಟಿ ಪರಿಮೊಗರು ಮತ್ತು ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಸಂತ್ರಸ್ತ ರೈತರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸೋಮವಾರ ಸ್ಥಳ ತನಿಖೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಕೆ.ಎನ್.ಮಾದಯ್ಯ, ಇನ್‍ಸ್ಪೆಕ್ಟರ್ ಭಾರತಿ, ಸಿಬ್ಬಂದಿ ಹರೀಶ್, ತಹಶೀಲ್ದಾರ್ ಪುರಂದರ ಹೆಗ್ಡೆ, ಉಪ ತಹಶೀಲ್ದಾರ್ ರಾಜೇಶ ನಾಯ್ಕ್, ಕಂದಾಯ ನಿರೀಕ್ಷಕ ಕೆ.ರಾಮ, ಸೀತಾರಾಮ ಪೂಜಾರಿ ಕಮ್ಮಾಜೆ, ಶೀತಲ್, ಕೃಷಿ ಅಧಿಕಾರಿ ನಾರಾಯಣ ಶೆಟ್ಟಿ, ಪಿಡಿಒ ಹರೀಶ್, ಗ್ರಾಮಕರಣಿಕೆ ಜ್ಯೋತಿ, ಸಹಾಯಕ ವಿಠಲ, ಯುಬಿ ಕಂಪೆನಿ ಪ್ರತಿನಿಧಿ ಪಾವ್ಲ್ ಜೇಮ್ಸ್, ಗುತ್ತಿಗೆದಾರ ಪ್ರೀತಂ ಮತ್ತಿತರರು ಹಾಜರಿದ್ದರು.
ಇದೇ ವೇಳೆ ಸಂತ್ರಸ್ತ ರೈತ ಮುಖಂಡರಾದ ಉಮೇಶ ಶೆಟ್ಟಿ ಪರಿಮೊಗರು, ಪ್ರಸನ್ನ ಕುಮಾರ್, ಪ್ರಮುಖರಾದ ಖಾದ್ರಿ ಬ್ಯಾರಿ, ಹಸನಬ್ಬ, ಗುಣಪಾಲ ಶೆಟ್ಟಿ, ನಾರಾಯಣ ಶೆಟ್ಟಿ, ರಾಮಚಂದ್ರ ದೇವಾಡಿಗ, ನಾರಾಯಣ ನಾಯ್ಕ್, ಜೋಸೆಫ್, ಶೀನ ಪೂಜಾರಿ, ಶಶಿಕಿರಣ್ ಮತ್ತಿತರರು ಇಲ್ಲಿನ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರಧನ ನೀಡಿ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು.







