ಶಿವಾಜಿ ಸ್ಮಾರಕ ನಿವೇಶನದ ಬದಲಾವಣೆಯಿಲ್ಲ: ಫಡ್ನವೀಸ್

ಮುಂಬೈ,ಅ.30: ಮುಂಬೈ ಕರಾವಳಿಯಾಚೆ ಅರಬ್ಬಿ ಸಮುದ್ರದಲ್ಲಿಯ ಉದ್ದೇಶಿತ ಛತ್ರಪತಿ ಶಿವಾಜಿ ಮಹಾರಾಜರ ಸ್ಮಾರಕ ನಿರ್ಮಾಣ ತಾಣವನ್ನು ಬದಲಿಸುವ ಸಾಧ್ಯತೆಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತಳ್ಳಿಹಾಕಿದ್ದಾರೆ.
ಸ್ಮಾರಕ ನಿರ್ಮಾಣದ ಕಾಮಗಾರಿ ಆರಂಭಗೊಳ್ಳಲಿದ್ದ ಅ.24ರಂದು ಸರಕಾರಿ ಅಧಿಕಾರಿಗಳು ಸೇರಿದಂತೆ 25 ಜನರನ್ನು ಅಲ್ಲಿಗೆ ಸಾಗಿಸುತ್ತಿದ್ದ ಬೋಟ್ ಸಮುದ್ರದಲ್ಲಿ ಮಗುಚಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಈ ದುರಂತವು ಸ್ಮಾರಕ ನಿರ್ಮಾಣದ ತಾಣವನ್ನು ನಗರದಲ್ಲಿಯ ಭೂಪ್ರದೇಶಕ್ಕೆ ಸ್ಥಳಾಂತರಿಸುವಂತೆ ಬೇಡಿಕೆಗೆ ಮರುಜೀವ ನೀಡಿದೆ.
ಸೋಮವಾರ ರಾತ್ರಿ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಫಡ್ನವೀಸ್,ಸ್ಮಾರಕ ತಾಣವನ್ನು ಬದಲಾಯಿಸಲು ಯಾವುದೇ ಕಾರಣವಿಲ್ಲ. ಈಗಾಗಲೇ ಸ್ಮಾರಕದ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ ಎಂದರು. ಕಳೆದ ವಾರದ ಘಟನೆಯನ್ನು ದುರದೃಷ್ಟಕರ ಎಂದು ಬಣ್ಣಿಸಿದ ಅವರು,ಬೋಟ್ ಚಾಲಕ ನಿರ್ಮಾಣ ತಾಣಕ್ಕೆ ಹತ್ತಿರದ ಮಾರ್ಗದಿಂದ ಸಾಗಿದ್ದರಿಂದ ಅವಘಡ ಸಂಭವಿಸಿತ್ತು ಎನ್ನುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದರು.
ಶಿವಾಜಿ ಮಹಾರಾಜರು ಸಮುದ್ರದಲ್ಲಿ,ಅದೂ ದುರ್ಗಮ ತಾಣಗಳಲ್ಲಿ ಹಲವಾರು ಕೋಟೆಗಳನ್ನು ನಿರ್ಮಿಸಿದ್ದರು. ನಮಗೆ ಇಂತಹ ಅನುಕೂಲವಾದ ಸ್ಥಳ ದೊರಕಿದೆ,ಆದರೂ ನಾವು ಅದರ ಬಗ್ಗೆ ಚರ್ಚಿಸುತ್ತಿದ್ದೇವೆ. ನಾವಿಷ್ಟು ಅಂಜುಬುರುಕರಾದರೆ ಹೇಗೆ ಎಂದು ಫಡ್ನವೀಸ್ ಪ್ರಶ್ನಿಸಿದರು.
ದುರ್ಘಟನೆಯ ಬಳಿಕ ಸುರಕ್ಷತೆಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿರುವ ಕೆಲವು ಮರಾಠಾ ಪರ ಸಂಘಟನೆಗಳು ಮತ್ತು ಕಂಕಾವ್ಲಿ ಶಾಸಕ ನಿತಿನ ರಾಣೆ ಅವರು ಸ್ಮಾರಕವನ್ನು ರಾಜಭವನದ ಆವರಣ ಅಥವಾ ಸಿಂಧುದುರ್ಗ ಕೋಟೆಗೆ ಸ್ಥಳಾಂತರಿಸುವಂತೆ ಆಗ್ರಹಿಸುತ್ತಿದ್ದಾರೆ.







