ಪೈಪ್ ಬಾಂಬ್ ಆರೋಪಿ ಬಲಿಪಶುಗಳ ಹಿಟ್ ಲಿಸ್ಟ್ ಹೊಂದಿದ್ದ
ಮಯಾಮಿ (ಅಮೆರಿಕ), ಅ. 30: ಡೆಮಾಕ್ರಟಿಕ್ ಪಕ್ಷದ ಪ್ರಮುಖ ನಾಯಕರು ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಇತರ ವಿರೋಧಿಗಳಿಗೆ ಪೈಪ್ ಬಾಂಬ್‌ಗಳನ್ನು ಅಂಚೆಯಲ್ಲಿ ಕಳುಹಿಸಿರುವ ಆರೋಪಿಯು, ಚುನಾಯಿತ ಪ್ರತಿನಿಧಿಗಳು ಮತ್ತು ಇತರ ಅಧಿಕಾರಿಗಳ ಹೆಸರುಗಳನ್ನು ಒಳಗೊಂಡ ಪಟ್ಟಿಯೊಂದನ್ನು ಹೊಂದಿದ್ದ ಎಂದು ಅಧಿಕಾರಿಯೊಬ್ಬರು ‘ಅಸೋಸಿಯೇಟೆಡ್ ಪ್ರೆಸ್’ ಸುದ್ದಿ ಸಂಸ್ಥೆಗೆ ಸೋಮವಾರ ಹೇಳಿದ್ದಾರೆ.
ಈ ಪಟ್ಟಿಯಲ್ಲಿ ಹೆಸರಿದ್ದವರಿಗೆ ಬಾಂಬ್‌ಗಳನ್ನು ಕಳುಹಿಸುವ ಯೋಜನೆಯನ್ನು ಆತ ಹೊಂದಿದ್ದ ಎಂಬುದಾಗಿ ಪ್ರಕರಣದ ತನಿಖಾಧಿಕಾರಿಗಳು ಭಾವಿಸಿದ್ದಾರೆ.
ಪ್ರಕರಣದ ಆರೋಪಿ 56 ವರ್ಷದ ಸೆಸರ್ ಸಯೋಕ್‌ನನ್ನು ಸೋಮವಾರ ಮಯಾಮಿ ಫೆಡರಲ್ ನ್ಯಾಯಾಲಯವೊಂದಕ್ಕೆ ಪ್ರಥಮ ಬಾರಿಗೆ ಹಾಜರುಪಡಿಸಲಾಯಿತು.
ಅಧಿಕಾರಿಗಳು ಆರೋಪಿಯ ವಶದಿಂದ ಸೋಲ್ಡರಿಂಗ್ ಸಲಕರಣೆ, ಪ್ರಿಂಟರ್ ಹಾಗೂ ಬಾಂಬ್‌ಗಳ ಪೊಟ್ಟಣಗಳಲ್ಲಿ ಬಳಸಲಾದ ಸ್ಟ್ಯಾಂಪ್‌ಗಳನ್ನು ಹೋಲುವ ಸ್ಟ್ಯಾಂಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದರು.
ಸಿಎನ್‌ಎನ್ ಕಚೇರಿಗೆ ಇನ್ನೊಂದು ಸಂಶಯಾಸ್ಪದ ಪೊಟ್ಟಣ
ಸಿಎನ್‌ಎನ್ ಟಿವಿ ವಾಹಿನಿಗೆ ಕಳುಹಿಸಲಾಗಿದ್ದ ಇನ್ನೊಂದು ಸಂಶಯಾಸ್ಪದ ಪೊಟ್ಟಣವನ್ನು ಅಟ್ಲಾಂಟದಲ್ಲಿ ತಡೆಹಿಡಿಯಲಾಗಿದೆ ಎಂದು ಸಿಎನ್‌ಎನ್ ಸೋಮವಾರ ತಿಳಿಸಿದೆ.
ಸಿಎನ್‌ಎನ್ ಸುದ್ದಿ ಜಾಲದ ವಿಳಾಸ ಹೊಂದಿದ್ದ ಪೊಟ್ಟಣವನ್ನು ಅಟ್ಲಾಂಟ ಅಂಚೆ ಕಚೇರಿಯಲ್ಲಿ ತಡೆಹಿಡಿಯಲಾಯಿತು ಎಂದು ಸಿಎನ್‌ಎನ್ ಜಾಗತಿಕ ಅಧ್ಯಕ್ಷ ಜೆಫ್ ಝುಕರ್ ಟ್ವಿಟರ್‌ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಹೇಳಿದ್ದಾರೆ.
ಘಟನೆಯಲ್ಲಿ ಯಾವುದೇ ಅಪಾಯವಾಗಿಲ್ಲ ಹಾಗೂ ಬುಧವಾರದ ಬಳಿಕ ಸಿಎನ್‌ಎನ್‌ಗೆ ಅಂಚೆ ಮೂಲಕ ಬರುವ ಎಲ್ಲ ವಸ್ತುಗಳನ್ನು ಕಚೇರಿಯಿಂದ ಹೊರಗಿನ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಝುಕರ್ ತಿಳಿಸಿದರು.







