ಟೋಲ್ ಗೇಟ್ ಗುತ್ತಿಗೆ ನವೀಕರಣ ವಿರೋಧಿಸಿ ಮುಂದುವರಿದ ಹಗಲು-ರಾತ್ರಿ ಧರಣಿ

ಮಂಗಳೂರು, ಅ. 30: ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡ ಸುರತ್ಕಲ್ ಟೋಲ್ ಗೇಟ್ ಮೂರು ವರ್ಷ ದಾಟಿದರೂ ತೆರವುಗೊಳ್ಳದಿರುವುದು ಒಪ್ಪ ತಕ್ಕ ವಿಷಯವಲ್ಲ. ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನಗೊಳಿಸುವ ನಿರ್ಧಾರ ಜಾರಿಗೊಳ್ಳದಿರುವ ಹಿಂದಿನ ನಿಗೂಢತೆ ಏನು ? ಕೂಳೂರು ಸೇತುವೆ ಕುಸಿಯುವ ಭೀತಿ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಜನತೆಯ ಜೊತೆ ನಿಂತು ನ್ಯಾಯ ಕೊಡಿಸಬೇಕಾದದ್ದು ಸಂಸದರ ಧರ್ಮ. ಆದರೆ ನಳಿನ್ ಕುಮಾರ್ ಕಟೀಲರು ಮೌನವಹಿಸಿದ್ದಾರೆ. ಇದು ಒಪ್ಪತಕ್ಕ ನಡೆಯಲ್ಲ ಎಂದು ಹಿರಿಯ ರಾಜಕಾರಣಿ, ಮಾಜಿ ಸಚಿವ ಅಮರನಾಥ ಶೆಟ್ಟಿ ಹೇಳಿದರು.
"ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ" ಸುರತ್ಕಲ್ ನಲ್ಲಿ ಟೋಲ್ ಗೇಟ್ ಸುಂಕ ವಸೂಲಿ ಗುತ್ತಿಗೆ ನವೀಕರಣ ವಿರೋಧಿಸಿ ಹಮ್ಮಿಕೊಂಡಿರುವ ಹಗಲು ರಾತ್ರಿ ಧರಣಿಯ ಒಂಬತ್ತನೇ ದಿನದ ಸಭೆಯನ್ನುದೇಶಿಸಿ ಅವರು ಮಾತನಾಡಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ರಘು ಎಕ್ಕಾರು ಮಾತನಾಡುತ್ತಾ ಸಂಸದ ನಳಿನ್ ಕುಮಾರ್ ಕಟೀಲ್ ತನ್ನ ಕ್ಷೇತ್ರದಲ್ಲಿ ಉಂಟಾಗಿರುವ ಅಧ್ವಾನಗಳನ್ನು ಮರೆ ಮಾಚಲು ಕೇರಳದತ್ತ ಕೈತೋರಿಸುತ್ತಿದ್ದಾರೆ. ಇಂತಹ ನಾಟಕಗಳು ವ್ಯಾಲಿಡಿಟಿ ಕಳೆದುಕೊಂಡಿವೆ. ಸಂಸದರು ಮೊದಲು ಜಿಲ್ಲೆಯ ಹೆದ್ದಾರಿ ಸಮಸ್ಯೆಗಳನ್ನು ಪರಿಹರಿಸಲಿ. ಆ ಮೇಲೆ ಕೇರಳದ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಜನತೆ ಸರಿಯಾದ ಪಲಿತಾಂಶ ನೀಡಲಿದ್ದಾರೆ ಎಂದರು.
ಮಾಜಿ ಮೇಯರ್ ಅಶ್ರಫ್ ಮಾತನಾಡುತ್ತಾ ಜಿಲ್ಲೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಟೋಲ್ ಗೇಟ್ ವಿರೋಧಿ ಹೋರಾಟ ಆ ನಿಟ್ಟಿನಲ್ಲಿ ಒಳ್ಳೆಯ ಬೆಳವಣಿಗೆ. ಈ ಹೋರಾಟ ಯಾವುದೇ ಕಾರಣಕ್ಕೂ ಗುರಿಮುಟ್ಟದೆ ನಿಲ್ಲಬಾರದು ಎಂದರು.
ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡುತ್ತಾ, ಅ.31ರಂದು ಬೆಳಗ್ಗೆ ಟೋಲ್ ಗೇಟ್ ಗುತ್ತಿಗೆ ಕೊನೆಗೊಳ್ಳುತ್ತದೆ. ಜಿಲ್ಲಾಧಿಕಾರಿಗಳ ಮಾತಿಗೆ ಬೆಲೆಕೊಟ್ಟು ಟೋಲ್ ಗೇಟ್ ಮುತ್ತಿಗೆ ಕಾರ್ಯಕ್ರಮವನ್ನು ಮುಂದಕ್ಕೆ ಹಾಕಿದ್ದೇವೆ. ಮುಂದಕ್ಕೆ ನ್ಯಾಯ ದೊರಕದಿದ್ದರೆ ಟೋಲ್ ಗೇಟ್ ಚಲೋ ಹಮ್ಮಿಕೊಳ್ಳುತ್ತೇವೆ. ನಾಳೆಯಿಂದ ಟೋಲ್ ಸಂಗ್ರಹ ಮುಂದುವರಿದರೆ ಜನತೆ ಸ್ವಯಂ ಪ್ರೇರಣೆಯಿಂದ ಸಾಮೂಹಿಕವಾಗಿ ಟೋಲ್ ನೀಡದೆ ಪ್ರತಿಭಟನೆ ಮಾಡಬೇಕು ಎಂದು ಮನವಿ ಮಾಡಿದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಮಾತನಾಡುತ್ತಾ ಅನಿರ್ಧಿಷ್ಟವಧಿ ಹೋರಾಟದ ಮೂಲಕ ಹಣತೆ ಹಚ್ಚಿದ್ದೇವೆ. ಜನತೆ ತಮ್ಮ ಬೆಂಬಲದ ಎಣ್ಣೆಯಿಂದ ಬೆಳಕು ಪ್ರಜ್ವಲಿಸುವಂತೆ ಮಾಡಿದ್ದಾರೆ. ಟೋಲ್ ಗೇಟ್ ಮುಚ್ಚಿಸುವಲ್ಲಿ ಸಂಸದರು ವಿಫಲರಾದರೆ ಬೆಳಕು ಬೆಂಕಿಯಾಗುತ್ತದೆ ಎಂದು ಎಚ್ಚರಿಸಿದರು.
ಒಂಬತ್ತನೇ ದಿನದ ಧರಣಿಗೆ ಹಲವು ಸಂಘಟನೆಗಳ, ರಾಜಕೀಯ ಮುಖಂಡರ ಬೆಂಬಲ ಹರಿದು ಬಂತು. ಮಾಜಿ ಶಾಸಕರಾದ ಶಕುಂತಲಾ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ, ಮೇಯರ್ , ಮೇಯರ್ ಭಾಸ್ಕರ ಕೆ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮನಪಾ ಸದಸ್ಯರಾದ ಡಿ ಕೆ ಅಶೋಕ್, ಅಬ್ದುಲ್ ಲತೀಫ್, ದೀಪಕ್ ಪೂಜಾರಿ, ಪ್ರವೀಣ್ ಚಂದ್ರ ಆಳ್ವ, ಅಯಾಜ್ ಕೃಷ್ಣಾಪುರ, ರೇವತಿ ಪುತ್ರನ್, ಪುರುಷೋತ್ತಮ ಚಿತ್ರಾಪುರ, ದಯಾನಂದ ಶೆಟ್ಟಿ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ದಿವಾಕರ ಶೆಟ್ಟಿ, ಮುಸ್ತಪಾ ಕಡಂಬೋಡಿ, ದಲಿತ ಮುಖಂಡರಾದ ಶೇಖರ ಹೆಜಮಾಡಿ, ಕಾಂಗ್ರೆಸ್ ಮುಖಂಡರಾದ ಸಂತೋಷ್ ಕುಮಾರ್ ಶೆಟ್ಟಿ, ಶಬೀರ್ ಸಿದ್ದಕಟ್ಟೆ, ಡಾ ಶೇಖರ ಪೂಜಾರಿ, ಬಜಪೆ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಂದ್ರ ಪೆರ್ಗಡೆ, ಸದಸ್ಯ ಸಿರಾಜ್ ಬಜ್ಪೆ, ಸಿ ಎಂ ಮುಸ್ತಫಾ, ಡಾ. ಶೇಖರ ಪೂಜಾರಿ, ಹುಸೈನ್ ಕಾಟಿಪಳ್ಳ, ಹಮೀದ್ ಕಟ್ಲ, ಶೇಖರ ಅಮೀನ್ ಜೋಕಟ್ಡೆ, ಸತ್ತಾರ್ ಸುರತ್ಕಲ್, ರಾಜೇಶ್ ಪೂಜಾರಿ ಸುರತ್ಕಲ್, ವಿದ್ಯಾರ್ಥಿ ಮುಖಂಡರಾದ ರೂಪೇಶ್ ರೈ, ಚರಣ್ ಶೆಟ್ಟಿ, ಸ್ಥಳೀಯ ಪ್ರಮುಖರಾದ ಪದ್ಮನಾಭ ಶೆಟ್ಟಿ ಪಡ್ರೆ, ಶ್ರೀಕಾಂತ್ ಸಾಲ್ಯಾನ್, ಚೈಲ್ಡ್ ಕ್ರಿಸ್ಟೋಪರ್ ಎಸೋಷಿಯೇಶನ್ ನ ವೀಡಾಪಿರೇರಾ ರೊನಾಲ್ಡ್ ಮೊಂತೆರೊ, ಡಾನಿ ಸುವಾರಿಸ್, ಗೂಡ್ಸ್ ಟೆಂಪೊ ಚಾಲಕರ ಸಂಘದ ಪ್ರಕಾಶ್ ಡಿ ಎಲ್, ಜಾನ್ ಡಿಸೋಜ, ಅಜೀಜ್, ಸಂತೆ ವ್ಯಾಪಾರಿಗಳ ಸಂಘದ ಬದ್ರುದ್ದೀನ್, ಫಾರೂಕ್, ಅಬೂಬಕ್ಕರ್, ನಝೀರ್, ಡಿವೈಎಫ್ಐ ಜಿಲ್ಲಾ ಮುಖಂಡರಾದ ಸಂತೋಷ್ ಬಜಾಲ್, ಮಹಾಬಲ ದೆಪ್ಪಲಿಮಾರ್, ನೌಷಾದ್ ಬಾವ, ಕರ್ನಾಟಕ ಪತ್ರಕರ್ತರ ಸಂಘ ದ ಕ ಜಿಲ್ಲಾ ಘಟಕದ ಅಧ್ಯಕ್ಷ ಸುದೇಶ್ ಕುಮಾರ್, ಬಾವಾ ಪದರಂಗಿ, ರಿಚರ್ಡ್, ಲತೀಫ್ ನೇರಳಕಟ್ಟೆ, ಜಬ್ಬಾರ್ ಮಲ್ಲೂರು, ಬಂಟ್ವಾಳ ಪತ್ರಕರ್ತರ ಸಂಘದ ಅಧ್ಯಕ್ಷ ಫಾರೂಕ್, ಮನಪಾ ಮಾಜಿ ಸದಸ್ಯ ಪದ್ಮನಾಭ ಅಮೀನ್, ಬಸ್ ನೌಕರರ ಸಂಘದ ಸೇಸಪ್ಪ, ಸ್ಥಳೀಯ ಮಖಂಡರಾದ ಮುಹಮ್ಮದ್ ಬಾವ ಅಂಗರಗುಂಡಿ, ಇಬ್ರಾಹಿಂ ಪ್ಯಾರಡೈಸ್, ಸಲೀಂ ಶ್ಯಾಡೋ, ರಫೀಕ್ ಕಾಟಿಪಳ್ಳ, ಬದ್ರಿಯಾ ಹೆಲ್ತ್ ಲೀಗ್ ಸುರತ್ಕಲ್ ನ ಝುಲ್ಫಿಕರ್, ಜೀಶಾನ್ ಆಲಿ, ನವೀದ್ ಇರ್ಷಾದ್, ಹರೀಶ್ ಪೇಜಾವರ, ಇಫ್ತಿಕರ್ ಕುಳಾಯಿ, ಗಿರಿಧರ ಸನಿಲ್, ಐ ಮುಹಮ್ಮದ್, ಕೆ ಯು ಮುಹಮ್ಮದ್ ಪಕ್ಷಿಕೆರೆ, ಹಮೀದ್ ಪಡುಬಿದ್ರೆ, ಮನೋಜ್ ಗುಡ್ಡೆಕೊಪ್ಲ, ಅಜ್ಮಲ್ ಕಾನ, ಅಝೀಝ್ ಮುಕ್ಕ, ಮಕ್ಸೂದ್, ಶ್ರೀಕಾಂತ್ ಸಾಲ್ಯಾನ್, ಹೋರಾಟ ಸಮಿತಿಯ ಪ್ರಮುಖರಾದ ವೈ ರಾಘವೇಂದ್ರ ರಾವ್ ರಾಜೇಶ್ ಶೆಟ್ಟಿ ಪಡ್ರೆ, ಶ್ರೀನಾಥ್ ಕುಲಾಲ್, ಕೆ ಯು ಮೂಸಬ್ಬ ಪಕ್ಷಿಕೆರೆ, ರಹೀಂ ಪಕ್ಷಿಕೆರೆ, ಟಿ ಎನ್ ರಮೇಶ್ ಮತ್ತಿತತರರು ಉಪಸ್ಥಿತರಿದ್ದರು.







