ನಾಳೆ ಪ್ರಧಾನಿ ಮೋದಿಯಿಂದ ಪಟೇಲ್ ಸ್ಮಾರಕ ಏಕತೆಯ ಪ್ರತಿಮೆ ಉದ್ಘಾಟನೆ

ವಡೋದರಾ,ಅ.30: ದೇಶದ ಪ್ರಥಮ ಉಪ ಪ್ರಧಾನ ಮಂತ್ರಿ ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರ ಗೌರವಾರ್ಥವಾಗಿ ನಿರ್ಮಾಣಗೊಂಡಿರುವ ಏಕತೆಯ ಪ್ರತಿಮೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ, ಅಕ್ಟೋಬರ್ 31ರಂದು ಉದ್ಘಾಟನೆಗೊಳಿಸಲಿದ್ದಾರೆ. ಭಾರತದ ಲೋಹದ ಮನುಷ್ಯ ಎಂದು ಪರಿಗಣಿಸಲ್ಪಟ್ಟಿರುವ ಪಟೇಲ್ ಅವರ ಪ್ರತಿಮೆಯನ್ನು ಗುಜರಾತ್‌ನ ಕೇವಡಿಯ ಪಟ್ಟಣದ ನರ್ಮದಾ ನದಿ ತೀರದಲ್ಲಿರುವ ಸಾಧು ಬೆಟ್ ಎಂಬ ದ್ವೀಪದಲ್ಲಿ ನಿರ್ಮಿಸಲಾಗಿದೆ. ಪಟೇಲರ 143ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಈ ಪ್ರತಿಮೆಯನ್ನು ಉದ್ಘಾಟನೆಗೊಳಿಸಲಾಗುವುದು. 182 ಮೀಟರ್ ಎತ್ತರದ ಏಕತೆಯ ಪ್ರತಿಮೆಯು ಈವರೆಗೆ ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆ ಎಂದು ಪರಿಗಣಿಸಲ್ಪಟ್ಟಿದ್ದ ಚೀನಾದ ಸ್ಪ್ರಿಂಗ್ ಟೆಂಪಲ್‌ನಲ್ಲಿರುವ ಬುದ್ಧನ 128 ಮೀಟರ್ ಎತ್ತರದ ಪ್ರತಿಮೆಯನ್ನು ಹಿಂದಿಕ್ಕಲಿದೆ. ಪಟೇಲರ ಪ್ರತಿಮೆಯು ಅಮೆರಿಕದ ‘ಸ್ಟ್ಯಾಚು ಆಫ್ ಲಿಬರ್ಟಿ’ ಪ್ರತಿಮೆಗಿಂತ ಎರಡು ಪಟ್ಟು ಎತ್ತರವಿದೆ ಎಂದು ವರದಿಗಳು ತಿಳಿಸಿವೆ.
ಬುಧವಾರ ಬೆಳಿಗ್ಗೆ 11.30ಕ್ಕೆ ಪ್ರತಿಮೆಯ ಉದ್ಘಾಟನೆ ನಡೆಯಲಿದ್ದು ಶನಿವಾರ, ನವೆಂಬರ್ 3ರಿಂದ ಸಾರ್ವಜನಿಕ ವೀಕ್ಷಣೆಗೆ ತೆರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉದ್ಘಾಟನಾ ಸಮಾರಂಭವು ಮೂರು ಗಂಟೆಗಳ ಕಾಲ ನಡೆಯುವ ನಿರೀಕ್ಷೆಯಿದ್ದು ನಂತರ ಪ್ರಧಾನಿ ದಿಲ್ಲಿಗೆ ಮರಳಲಿದ್ದಾರೆ. ಈ ವೇಳೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಭಾರತೀಯ ವಾಯುಪಡೆಯ ಸೂರ್ಯ ಕಿರಣ ಏರೊಬಾಟಿಕ್ಸ್ ತಂಡ ಆಕಾಶದಲ್ಲಿ ತ್ರಿವರ್ಣವನ್ನು ಹರಡಲಿದೆ ಮತ್ತು ಏರೊಬಾಟಿಕ್ಸ್ ಪ್ರದರ್ಶನ ನೀಡಲಿದೆ.
ಜಾಗ್ವರ್ ಯುದ್ಧ ವಿಮಾನಗಳೂ ಈ ಸಮಾರಂಭದಲ್ಲಿ ಪಾಲುಪಡೆಯಲಿದ್ದು ಎಂಐ-17 ಹೆಲಿಕಾಪ್ಟರ್‌ಗಳು ಪಟೇಲ್ ಪ್ರತಿಮೆಯ ಮೇಲೆ ಪುಷ್ಟಮಳೆ ಸುರಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಪ್ರಧಾನಿಯನ್ನು ಸಶಸ್ತ್ರ ಪಡೆಗಳು, ಗುಜರಾತ್ ಪೊಲೀಸ್, ರಾಜ್ಯ ಮೀಸಲು ಪೊಲೀಸ್ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಗಡಿ ಭದ್ರತಾ ಪಡೆ ಬ್ಯಾಂಡ್‌ಗಳ ಜೊತೆಗೆ 29 ರಾಜ್ಯಗಳು ಮತ್ತು ಕೇಂದ್ರಾಡಳಿತಗಳ ಸಾಂಸ್ಕೃತಿಕ ತಂಡಗಳು ಸ್ವಾಗತಿಸಲಿವೆ. ವಿವಿಧ ರಾಜ್ಯಗಳ ಜನಪದ ನೃತ್ಯಗಳ ಪ್ರದರ್ಶನ ನಡೆಯಲಿದ್ದು ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಏಕತೆಯ ಗೋಡೆಯನ್ನೂ ಉದ್ಘಾಟಿಸಲಿದ್ದಾರೆ. ನಂತರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 3,000 ಕೋಟಿ ರೂ. ವೆಚ್ಚದೊಂದಿಗೆ ನಿರ್ಮಾಣಗೊಂಡಿರುವ ಏಕತೆಯ ಪ್ರತಿಮೆಯನ್ನು ಬಿಜೆಪಿ ಏಕತೆಯ ಚಿಹ್ನೆ ಎಂದು ವ್ಯಾಖ್ಯಾನಿಸಿದೆ. ಪ್ರತಿಮೆ ಅನಾವರಣದ ಪೂರ್ವ ಸಂಭ್ರಮವಾಗಿ ಬಿಜೆಪಿ ಗುಜರಾತ್‌ನಲ್ಲಿ ಅಕ್ಟೋಬರ್ 19ರಿಂದ 29ರ ವರೆಗೆ ಏಕತೆ ಯಾತ್ರೆಗಳನ್ನು ಆಯೋಜಿಸಿತ್ತು.







