‘ಏಕೀಕರಣದ ಮಹತ್ವಕ್ಕಾಗಿ’ ಉಚಿತ ಪುಸ್ತಕ ವಿತರಣೆ

ಬೆಂಗಳೂರು, ಅ.30: ಅಖಂಡ ಕರ್ನಾಟಕ ಏಕೀಕರಣಕ್ಕೆ ಹಲವು ಗಣ್ಯರು ಮಾಡಿದ ತ್ಯಾಗ, ಬಲಿದಾನವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ಉಚಿತವಾಗಿ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.
ಮಂಗಳವಾರ ನಗರದ ಕಬ್ಬನ್‌ಪೇಟೆಯ ಅಬ್ಬಾಸ್ ಖಾನ್ ಮಹಿಳಾ ಕಾಲೇಜಿನಲ್ಲಿ ತಾಯಿ-ಮಡಿಲು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನೂರಾರು ವಿದ್ಯಾರ್ಥಿಗಳಿಗೆ ‘ಕರ್ನಾಟಕ ಏಕೀಕರಣ’ ಕುರಿತ ಪುಸ್ತಕವನ್ನು ಉಚಿತವಾಗಿ ವಿತರಣೆ ಮಾಡಿದರು.
ಈ ಕುರಿತು ವಿಮರ್ಶಕ ಸಿ.ಕೆ.ರಾಮೇಗೌಡ ಮಾತನಾಡಿ, ಕನ್ನಡ ನಾಡು, ಪ್ರಾಕೃತಿಕ, ಸಾಹಿತ್ಯಿಕ ಸಾಂಸ್ಕೃತಿಕವಾಗಿ ಶ್ರೀಮಂತ ಪರಂಪರೆ ಹೊಂದಿರುವ ನಾಡು. ನಮ್ಮ ನಾಡು ನುಡಿಯ ಇತಿಹಾಸ ಪರಂಪರೆಯ ಅರಿವು ನಮ್ಮಲ್ಲಿದ್ದಾಗ ಸಹಜವಾಗಿ ನಮ್ಮ ತಾಯಿ ನಾಡಿಗೆ, ನುಡಿಯ ಬಗೆಗೆ ಅಭಿಮಾನ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಸಾಹಿತ್ಯದ ಓದಿನಿಂದ ಮನುಷ್ಯನ ಜ್ಞಾನ ವಿಸ್ತಾರ ಆಗುವುದರ ಜೊತೆಗೆ ಸಮಾಜಮುಖಿಯಾಗಿ ಬೆಳೆಯಲು ಸಹಾಯವಾಗುತ್ತದೆ. ಕಾಲೇಜು ವಿದ್ಯಾರ್ಥಿಗಳು ಸಾಹಿತ್ಯ ಪುಸ್ತಕಗಳನ್ನು ಓದುವಂತೆ ಆಗಬೇಕು ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲೆ ಪ್ರೊ.ಜುಬೇದಾ ಬೇಗಂ ಮಾತನಾಡಿ, ಪ್ರತಿ ವರ್ಷವೂ ಸಮಾಜದ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಜೊತೆಗೆ ಹತ್ತಾರು ಸಾಂಸ್ಕೃತಿಕ-ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಮಾಜದ ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣ ಪಡೆದರೆ, ಉನ್ನತ ಪದವಿಯ ಸರಕಾರಿ ಹುದ್ದೆಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಸ್ಥಾನ ಪಡೆಯಲು ಸಹಾಯಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ರಾಧಾಕೃಷ್ಣ, ಮಮತಾ ಅಶೋಕ, ವಿದ್ಯಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.







