ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಗೆ ಸನ್ಮಾನ

ಮಂಗಳೂರು, ಅ.30: ಕ್ಯಾಥೋಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾ ವತಿಯಿಂದ ನಗರದ ಸಂತ ಆ್ಯಗ್ನೆಸ್ ಕಾಲೇಜಿನ ಅವಿಲಾ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಂಗಳೂರು ಬಿಷಪ್ ಅತಿವಂದನೀಯ ಡಾ.ಪೀಟರ್ ಪಾವ್ಲ್ ಸಲ್ಡಾನ್ಹ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿಷಪ್ ಅತಿವಂದನೀಯ ಡಾ.ಪೀಟರ್ ಪಾವ್ಲ್ ಸಲ್ಡಾನ್ಹ, ಮಂಗಳೂರು ಧರ್ಮ ಪ್ರಾಂತ್ಯ ವ್ಯಾಪ್ತಿಯಲ್ಲಿ ಹಲವಾರು ಚರ್ಚ್‌ಗಳಿದ್ದು, ಧರ್ಮ ಪ್ರಚಾರದ ಜೊತೆ ಸೇವಾ ಕಾರ್ಯಗಳನ್ನು ಕೈಗೊಂಡಿವೆ. ಇಲ್ಲಿನ ಚರ್ಚ್‌ಗಳ ಕಾರ್ಯ ನಿರ್ವಹಣೆಯು ವಿದೇಶಗಳಿಗೂ ಆಕರ್ಷಣೀ ಯವಾಗಿ ಗೋಚರಿಸುತ್ತಿವೆ. ಮಂಗಳೂರು ಧರ್ಮಪ್ರಾಂತ್ಯ ಕ್ರೈಸ್ತರ ಪೂರ್ವ ಭಾಗದ ರೋಮ್ ಆಗಿದೆ ಎಂದು ತಿಳಿಸಿದರು.
ಪೋಪ್ ಫ್ರಾನ್ಸಿಸ್ ಅವರು ದಯಾಳುವಾಗಿದ್ದು, ಅಲ್ಲಿನ ವಸತಿರಹಿತರಿಗೆ ಮನೆಗಳನ್ನು ನೀಡಿದ್ದಾರೆ. ನಿರಾಶ್ರಿತರಿಗೆ ಆಶ್ರಯವನ್ನು ಕಲ್ಪಿಸಿದ್ದಾರೆ. ಸೇವಿಸುವ ಆಹಾರವನ್ನು ಯಾವುದೇ ಕಾರಣಕ್ಕೂ ವ್ಯರ್ಥ ಮಾಡುವ ಹಕ್ಕನ್ನು ದೇವರು ನಮಗೆ ನೀಡಿಲ್ಲ. ಬಡವರಿಗೆ ಸಾಧ್ಯವಾದಷ್ಟು ಸಹಾಯ, ಸಹಕಾರ ನೀಡಬೇಕು ಎಂದು ಹೇಳಿದರು.
ಮಂಗಳೂರು ಕ್ರೈಸ್ತರು ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಸೇವೆ, ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಕೊಡುಗೆಯನ್ನು ನೀಡಿದ್ದಾರೆ; ನೀಡುತ್ತಾ ಬರುತ್ತಿದ್ದಾರೆ. ಕ್ರೈಸ್ತರು ಉದಾರವಾದಿಗಳಾಗಿದ್ದು, ನಾವು ಹಂಚಿಕೊಳ್ಳೋಣ, ನಾವು ಸಂರಕ್ಷಿಸೋಣ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ಬಿಷಪ್ ಅತಿವಂದನೀಯ ಡಾ.ಪೀಟರ್ ಪಾವ್ಲ್ ಸಲ್ಡಾನ್ಹ ನೇತೃತ್ವದಲ್ಲಿ ಬಲಿಪೂಜೆಯನ್ನು ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಯಾಥೋಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾ ಅಧ್ಯಕ್ಷತೆ ನಯನಾ ಫೆರ್ನಾಂಡೀಸ್, ಶಾಲೆಟ್ ಪಿಂಟೋ, ಗುಲೋಬೊ ಫೆರ್ನಾಂಡೀಸ್, ಉಲ್ಲಾಸ್ ರಸ್ಕೀನ್ಹ, ಪಾಟ್ಸಿ ಲೋಬೊ, ಡಾ.ಆನಂದ್ ಪೆರೇರಾ, ಡಾ.ಡೆರೆಕ್ ಲೋಬೊ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಯನಾ ಫೆರ್ನಾಂಡೀಸ್ ಸ್ವಾಗತಿಸಿದರು. ರೋಸ್‌ಮಾರಿ ಸಲ್ಡಾನ್ಹ ನಿರೂಪಿಸಿದರು. ಕ್ಯಾಥೋಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾ ಉಪಾಧ್ಯಕ್ಷ ಕ್ಯಾ.ವಿನ್ಸೆಂಟ್ ಪಾಯಿಸ್ ವಂದಿಸಿದರು.







