ಮೂಡುಬಿದಿರೆ: ನ.1 ರಿಂದ 'ಕಾಂತಾವರ ಸಾಹಿತ್ಯೋತ್ಸವ 2018'
ಮೂಡುಬಿದಿರೆ, ಅ. 30: ಕನ್ನಡ ರಾಜ್ಯೋತ್ಸವದ ಅಂಗವಾಗಿ ನ. 1 ಮತ್ತು 2ರಂದು ಕಾಂತಾವರದಲ್ಲಿ 'ಕಾಂತಾವರ ಸಾಹಿತ್ಯೋತ್ಸವ 2018' ನಡೆಯಲಿದೆ.
ನ.1 ರಂದು ಮಧ್ಯಾಹ್ನ 3 ರಿಂದ ಕೇಂದ್ರ ಸರ್ಕಾರದ ಹಿರಿಯ ವಾರ್ತಾಧಿಕಾರಿ ಡಾ. ಟಿ.ಸಿ.ಪೂರ್ಣಿಮಾ ಉತ್ಸವವನ್ನು ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬೆಂಗಳೂರಿನ ಸೆಲ್ಕೋ ಸೋಲಾರ್ ಪ್ರೈ. ಲಿಮಿಟೆಡ್‍ನ ಪ್ರಧಾನ ವ್ಯವಸ್ಥಾಪಕ ಮೋಹನ ಭಾಸ್ಕರ ಹೆಗಡೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸಾಂಸ್ಕಂತಿಕ ಏಕೀಕರಣ ಪ್ರಶಸ್ತಿ (ಡಾ. ಹರಿಕೃಷ್ಣ ಭರಣ್ಯ), ವಿದ್ವತ್ ಪರಂಪರಾ ಪ್ರಶಸ್ತಿ (ಕೆ.ಎಸ್.ನಾರಾಯಣಾಚಾರ್ಯ) ಸಂಶೋಧನಾ ಮಹೋಪಾಧ್ಯಾಯ ಪ್ರಶಸ್ತಿ (ಡಿ.ವಿಷ್ಣು ಭಟ್ ಡೋಂಗ್ರೆ) ಕಾಂತಾವರ ಸಾಹಿತ್ಯ ಪ್ರಶಸ್ತಿ (ಡಾ. ಶ್ರೀಪಾದ ಶೆಟ್ಟಿ) ಕಾಂತಾವರ ಲಲಿತಕಲಾ ಪ್ರಶಸ್ತಿ (ಡಾ. ಸಫ್ರ್ರಾಜ್ ಚಂದ್ರಗುತ್ತಿ) ಅವರಿಗೆ ಪ್ರದಾನಿಸಲಾಗುವುದು.
ನ. 2ರಂದು 'ನಾಡಿಗೆ ನಮಸ್ಕಾರ' ಗ್ರಂಥಮಾಲೆಯ ನೂತನ ಹನ್ನೆರಡು ಕೃತಿಗಳನ್ನು ಹಿರಿಯ ಪತ್ರಕರ್ತ ಅಮ್ಮೆಂಬಳ ಆನಂದ ಅವರು ಅನಾವರಣಗೊಳಿಸಲಿದ್ದಾರೆ. ಸಂಘದ ಸಂಸ್ಕೃತಿ ಸಂಭ್ರಮ ಮಾಲೆಯ ನೂತನ ಕೃತಿ ಡಾ. ಹರಿಕೃಷ್ಣ ಭರಣ್ಯ ಸಂಪಾದಿಸಿದ ಕೃತಿಯನ್ನು ಎಂ.ಸಿ.ಎಸ್ ಬ್ಯಾಂಕಿನ ಸಿಇಒ ಚಂದ್ರಶೇಖರ ಎಂ. ಅವರು ಬಿಡುಗಡೆಗೊಳಿಸಲಿದ್ದಾರೆ ಮತ್ತು ಮಧ್ಯಾಹ್ನ ಗಂಟೆ 2 ರಿಂದ ಸುರತ್ಕಲ್ ವಾಸುದೇವರಾವ್ ಅವರ ನೇತೃತ್ವದಲ್ಲಿ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಲಿ ಸುರತ್ಕಲ್ ಇವರಿಂದ ಯಕ್ಷಗಾನ ತಾಳಮದ್ದಳೆ 'ಸುದರ್ಶನ ವಿಜಯ' ನಡೆಯಲಿದೆ.
ಕಂಠೀರವ ಸ್ಟುಡಿಯೋದ ನಿರ್ದೇಶಕ ಕೆ.ಮೋಹನದೇವ ಆಳ್ವ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.







