ಕುದುರೆಮುಖ ರಾ.ಉದ್ಯಾನವನದಲ್ಲಿ ಸಿನೆಮಾ ಚಿತ್ರೀಕರಣ: ವನ್ಯಜೀವಿ, ಪರಿಸರಕ್ಕೆ ಧಕ್ಕೆ; ಆರೋಪ

ಚಿಕ್ಕಮಗಳೂರು, ಅ.30: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುದುರೆಮುಖ ವಲಯದ ಭದ್ರಾ ನದಿ ಪಾತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅಭಿನಯದ ಚಲನಚಿತ್ರವೊಂದರ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರೀಕರಣದಿಂದಾಗಿ ಇಲ್ಲಿನ ಸುಂದರ ಪರಿಸರ ಹಾಗೂ ವನ್ಯಜೀವಿಗಳ ಸ್ವಚ್ಛಂದ ಬುದುಕಿಗೆ ತೊಂದರೆಯಾಗಲಿದೆ ಎಂದು ಪರಿಸರ ಸಂಘಟನೆಗಳಾದ ಭದ್ರಾ ವೈಲ್ಡ್‍ಲೈಫ್ ಕನ್ಸರ್‍ವೇಷನ್ ಟ್ರಸ್ಟ್‍ನ ಡಿ.ವಿ.ಗಿರೀಶ್, ವೈಲ್ಡ್ ಕ್ಯಾಟ್-ಸಿ ಸಂಸ್ಥೆಯ ಶ್ರೀದೇವ್ ಹುಲಿಕೆರೆ ಹಾಗೂ ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ.ವೀರೇಶ್ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ವ್ಯಾಪ್ತಿಯಲ್ಲಿರುವ ಕುದುರೆಮುಖ ರಾ.ಉದ್ಯಾನವನದಲ್ಲಿ ಹಾಗೂ ಭದ್ರಾ ನದಿ ಪಾತ್ರದಲ್ಲಿ ಕಳೆದೊಂದು ವಾರದಿಂದ ಕನ್ನಡ ಸಿನೆಮಾದ ಕೆಲ ದೃಶ್ಯಗಳು ಹಾಗೂ ಹಾಡಿನ ದೃಶ್ಯಗಳ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಚಿತ್ರೀಕರಣದಲ್ಲಿ ನೂರಾರು ಮಂದಿ ಕಲಾವಿದರು, ತಂತ್ರಜ್ಞರು ತೊಡಗಿಸಿಕೊಂಡಿದ್ದಾರೆ. ಅರಣ್ಯ ಪ್ರದೇಶ ಹಾಗೂ ವನ್ಯಜೀವಿಗಳ ಆವಾಸಸ್ಥಾನದಲ್ಲಿ ಮನುಷ್ಯರ ಹಾವಳಿಯಿಂದ ಪ್ರಾಣಿಗಳಿಗೆ ಬದುಕಿಗೆ ತೊಂದರೆಯಾಗಲಿದೆ. ಅಲ್ಲದೇ ನೂರಾರು ಜನರು ಕೆಲಸ ಮಾಡುವ ಜಾಗದಲ್ಲಿ ಕಸ, ತ್ಯಾಜ್ಯ ಎಸೆಯುವುದರಿಂದ ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ತುಂಗಾ, ಭದ್ರಾ, ನೇತ್ರಾವತಿ ಇನ್ನು ಮುಂತಾದ ನದಿಗಳು ಮತ್ತು ಉಪ ನದಿಗಳು ಹುಟ್ಟುತ್ತವೆ. ಹುಲಿ, ಚಿರತೆ, ಆನೆ ಸೇರಿದಂತೆ ಸಸ್ತನಿಗಳು ಮತ್ತು ಸರಿಸೃಪಗಳು, ವಿನಾಶದ ಅಂಚಿನಲ್ಲಿರುವ ಸಿಂಗಳೀಕ ಕಫಿ ಸೇರಿದಂತೆ ಹಲವು ವನ್ಯಜೀವಿಗಳು ಇಲ್ಲಿವೆ. ಪಶ್ಚಿಮಘಟ್ಟದ ಅತೀ ಸೂಕ್ಷ್ಮಪ್ರದೇಶ, ನಿತ್ಯ ಹರಿದ್ವರ್ಣ ಕಾಡು, ಶೋಲಾ ಕಾಡು ಮತ್ತು ಹುಲ್ಲುಗಾವಲುಗಳಿಂದ ಕುದುರೆಮುಖ ಆವೃತವಾಗಿದೆ. ಇಂತಹ ಪರಿಸರದಲ್ಲಿ ವಾಣಿಜ್ಯ ಚಲನಚಿತ್ರದ ಚಿತ್ರೀಕರಣ ಕಳೆದ ರವಿವಾರದಿಂದ ಅದ್ದೂರಿಯಾಗಿ ನಡೆದಿದೆ. ಚಿತ್ರೀಕರಣದ ವೇಳೆ ಎಲ್ಲಾ ಅರಣ್ಯ ಕಾನೂನು ಕಾಯ್ದೆಗಳನ್ನು, ನಿಬಂಧನೆಗಳನ್ನು ಗಾಳಿಗೆ ತೂರಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿ ಭದ್ರಾ ನದಿ ಮೂಲದಲ್ಲಿ ಕೃತಕ ಸೆಟ್‍ಗಳನ್ನು ನಿರ್ಮಿಸಿ, ಖಾಸಗಿ ದೋಣಿಗಳನ್ನು ಬಳಸಿ, ಕರ್ಕಶ ಶಬ್ದ ಉಂಟುಮಾಡುವ ಮೈಕ್‍ಗಳನ್ನು ಮತ್ತು ಸ್ಪೀಕರ್‍ಗಳನ್ನು ಅಳವಡಿಸಿ ಇಡೀ ದಿನ ಉದ್ಯಾನವನದಲ್ಲಿ ಚಿತ್ರೀಕರಣ ನಡೆಸಿ ಶಬ್ದಮಾಲಿನ್ಯವನ್ನೂ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಸಿನೆಮಾ ತಂಡದವರು ಅರಣ್ಯದ ನೀರವ ವಾತಾವರಣವನ್ನು ಕಲುಷಿತಗೊಳಿಸಿದ್ದಾರೆ. ಪ್ಲಾಸ್ಟಿಕ್ ಲೋಟಗಳು, ತಟ್ಟೆಗಳು ಇನ್ನಿತರ ಮಾಲಿನ್ಯಕಾರಕ ವಸ್ತುಗಳನ್ನು ಉದ್ಯಾನವನದ ವ್ಯಾಪ್ತಿಯ ಭದ್ರಾ ನದಿಯಲ್ಲಿ ಹಾಕಲಾಗಿದೆ. ಚಿತ್ರೀಕರಣ ನೋಡಲು ಪ್ರವಾಸಿಗರು ಸೇರಿದಂತೆ ನೂರಾರು ಕಾರುಗಳಲ್ಲಿ ಬಂದು ಜನ ಸೇರಿದ್ದರಿಂದ ವನ್ಯಜೀವಿಗಳ ಸ್ವಚ್ಛಂದ ಬದುಕಿಗೆ ಧಕ್ಕೆಯಾಗುತ್ತಿದೆ ಎಂದು ದೂರಿರುವ ಅವರು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಯಾವುದೇ ವಾಣಿಜ್ಯ ಚಲನಚಿತ್ರಗಳಿಗೆ ಚಿತ್ರೀಕರಣಕ್ಕೆ ಅವಕಾಶ ಕೊಡಬಾರದು. ವನ್ಯಜೀವಿಗಳ ನೆಮ್ಮದಿಯ ಬದುಕಿಗೆ ಭಂಗ ತರುವ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಚಿತ್ರೀಕರಣಕ್ಕೆ ನೀಡಿರುವ ಅನುಮತಿಯನ್ನು ಕೂಡಲೇ ಹಿಂಪಡೆಯಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.







