ಹಕ್ಕು ಪತ್ರ ವಿತರಿಸದೆ ತಡೆ ಆರೋಪ: ಬಂಟ್ವಾಳ ಮಿನಿ ವಿಧಾನಸೌಧಕ್ಕೆ ಮುತ್ತಿಗೆ

ಬಂಟ್ವಾಳ, ಅ. 30: ರಾಜಕೀಯ ಒತ್ತಡಕ್ಕೆ ಮಣಿದು 94ಸಿ ಹಕ್ಕು ಪತ್ರಗಳನ್ನು ವಿತರಿಸದೆ ತಡೆ ಹಿಡಿದು ಕಂದಾಯ ಇಲಾಖೆಯ ಅಧಿಕಾರಿಗಳು ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಸರಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳು ಮಂಗಳವಾರ ಸಂಜೆ ಬಂಟ್ವಾಳ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.
ಸರಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಮಣಿನಾಲ್ಕೂರು ಹಾಗೂ ಸರಪಾಡಿ ಗ್ರಾಮದ ಮಹಿಳೆಯರು ಸಹಿತ ನೂರಕ್ಕಿಂತಲೂ ಅಧಿಕ ಮಂದಿ 94ಸಿ ಫಲಾನುಭವಿಗಳು ಬಂಟ್ವಾಳಕ್ಕೆ ಆಗಮಿಸಿ ತಹಶೀಲ್ದಾರ್ ಕಚೇರಿಯ ಮುಂದೆ ಧರಣಿ ನಡೆಸಿ ಹಕ್ಕು ಪತ್ರ ಪಡೆಯದೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಬಂಟ್ವಾಳಕ್ಕೆ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಿನಿವಿಧಾನ ಸೌಧಕ್ಕೆ ಆಗಮಿಸಿ ಸರಪಾಡಿ ಗ್ರಾಮಸ್ಥರ ಪ್ರತಿಭಟನೆಗೆ ಸಾಥ್ ನೀಡಿದರೆ, ಅನೇಕ ಮಂದಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
Next Story





