ಮಡಿಕೇರಿ: ಸ್ಮಶಾನ ಜಾಗಕ್ಕಾಗಿ ಆಗ್ರಹಿಸಿ ಮೃತದೇಹವಿರಿಸಿ ಪ್ರತಿಭಟನೆ

ಮಡಿಕೇರಿ, ಅ.30 : ಹೊದ್ದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲೇಮಾಡು (ಕಾನ್ಶಿರಾಂ ನಗರ)ವಿನಲ್ಲಿ ದಲಿತರಿಗಾಗಿ ಮಂಜೂರಾಗಿದ್ದ ಸ್ಮಶಾನ ಜಾಗವನ್ನು ಜಿಲ್ಲಾಡಳಿತ ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ಗುತ್ತಿಗೆ ನೀಡಿದ್ದು, ಇದನ್ನು ಕೂಡಲೆ ರದ್ದು ಪಡಿಸಿ ಹಿಂದಿರುಗಿಸಬೇಕೆಂದು ಆಗ್ರಹಿಸಿ ಬಹುಜನ ಕಾರ್ಮಿಕರ ಸಂಘವು ಗ್ರಾಮದಲ್ಲಿ ನಿಧನರಾದ ವ್ಯಕ್ತಿಯೊಬ್ಬರ ಮೃತದೇಹವಿರಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಮೂರ್ನಾಡು ಬಳಿಯ ಹೊದ್ದೂರು ಪಾಲೇಮಾಡಿನಲ್ಲಿ ಸೋಮವಾರ ರಾತ್ರಿ ಗಣೇಶ್(67) ಎಂಬವರು ನಿಧನರಾಗಿದ್ದು, ಇವರ ಮೃತದೇಹವನ್ನಿರಿಸಿಕೊಂಡು ಬಹುಜನ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕೆ. ಮೊಣ್ಣಪ್ಪ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕೆಂದು ಆಗ್ರಹಿಸಿದರು.
ಪಾಲೇಮಾಡು ಕಾನ್ಶಿರಾಂ ನಗರದಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ಇತರೆ ಸಮುದಾಯಗಳ ಬಡವರು ಸೇರಿದಂತೆ ಸುಮಾರು 300 ಕ್ಕೂ ಅಧಿಕ ಕುಟುಂಬಗಳು ವಾಸ ಮಾಡುತ್ತಿವೆ. ಇವರಲ್ಲಿ ಪರಿಶಿಷ್ಟರ ಶವ ಸಂಸ್ಕಾರಕ್ಕೆಂದೇ ಮೀಸಲಾಗಿದ್ದ 2 ಏಕರೆ ಜಾಗವನ್ನು ಕ್ರಿಕೆಟ್ ಮಂಡಳಿಗೆ ಸ್ಟೇಡಿಯಂ ನಿರ್ಮಾಣಕ್ಕೆ ನೀಡಲಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರರು ಜಾಗವನ್ನು ಹಿಂದಿರುಗಿಸುವಂತೆ ಆಗ್ರಹಿಸಿದರು.
ಸ್ಥಳಕ್ಕೆ ಎಸಿ ಭೇಟಿ
ಮಂಗಳವಾರ ಮಧ್ಯಾಹ್ನದ ಬಳಿಕ ಉಪ ವಿಭಾಗಾಧಿಕಾರಿ ಜವರೇಗೌಡ ಹಾಗೂ ಡಿವೈಎಸ್‍ಪಿ ಸುಂದರರಾಜ್ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು. ವಿಷಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.
ನಂತರ ಪ್ರತಿಭಟನಾಕಾರರು ಮೃತ ಗಣೇಶ್‍ರ ಅಂತಿಮ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟರಾದರು, ಪ್ರತಿಭಟನೆಯನ್ನು ಮುಂದುವರಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.







