ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣ: ನರೇಶ್ ಶೆಣೈ ಮಂಪರು ಪರೀಕ್ಷೆ ಕೋರಿ ಮರು ಪರಿಶೀಲನೆ ಅರ್ಜಿ

ವಿನಾಯಕ ಬಾಳಿಗಾ - ನರೇಶ್ ಶೆಣೈ
ಮಂಗಳೂರು, ಅ.30: ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈಯ ಮಂಪರು ಪರೀಕ್ಷೆಗೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರಕರಣದ ಸತ್ಯಾಂಶ ಹೊರಬರಬೇಕಾದರೆ ಮಂಪರು ಪರೀಕ್ಷೆಯ ಅರ್ಜಿಯನ್ನು ಮರು ಪರಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸುವುದಾಗಿ ಈ ಪ್ರಕರಣದಲ್ಲಿ ಬಾಳಿಗಾ ಕುಟುಂಬದ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸುತ್ತಿರುವ ರವೀಂದ್ರ ಕಾಮತ್ ತಿಳಿಸಿದ್ದಾರೆ.
‘‘ಬಾಳಿಗಾ ಹತ್ಯೆ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿದ ದೋಷಾರೋಪಣ ಪಟ್ಟಿಯ ಪ್ರಕಾರ ಪ್ರಮುಖ ಆರೋಪಿಯಾಗಿರುವ ನರೇಶ್ ಶೆಣೈಯನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ನಿರ್ದೇಶಿಸುವಂತೆ ಬಾಳಿಗಾ ಕುಟುಂಬದ ಪರವಾಗಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ.
2010ರಲ್ಲಿ ಸೆಲ್ವಿ ವರ್ಸಸ್ ಕರ್ನಾಟಕ ರಾಜ್ಯ ಸರಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ಪೂರ್ಣ ಪೀಠ ಆರೋಪಿಯ ಇಚ್ಛೆಯ ವಿರುದ್ಧ ಮಂಪರು ಪರೀಕ್ಷೆ ಮಾಡಿದರೆ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಆದೇಶಿಸಿತ್ತು. ಈ ತೀರ್ಪಿನ ಹಿನ್ನೆಲೆಯಲ್ಲಿ ನರೇಶ್ ಶೆಣೈ ಪ್ರಕರಣದಲ್ಲಿ ಮಂಪರು ಪರೀಕ್ಷೆಗೆ ಆದೇಶ ನೀಡಲು ಸುಪ್ರೀಂ ಕೋರ್ಟ್ನ ನ್ಯಾಯ ಪೀಠ ನಿರಾಕರಿಸಿದೆ. ಆದರೆ ಇಂತಹ ಪ್ರಕರಣಗಳಲ್ಲಿ ಪ್ರತೀ ಆರೋಪಿಯು ತನಗೆ ಮಂಪರು ಪರೀಕ್ಷೆಗೆ ಇಚ್ಛೆ ಇಲ್ಲ ಎಂದು ಹೇಳಿದರೆ ಸತ್ಯ ಹೊರಬರುವುದಾದರೂ ಹೇಗೆ ? ಅದಕ್ಕಾಗಿ ನರೇಶ್ ಮಂಪರು ಪರೀಕ್ಷೆ ಅರ್ಜಿಯ ಪುನರ್ ಪರಿಶೀಲನೆಗೆ ಅರ್ಜಿ ಸಲ್ಲಿಸಲಾಗುವುದು’’ ಎಂದು ರವೀಂದ್ರ ಕಾಮತ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ತಪ್ಪು ಮಾಡದವರಿಗೆ ಮಂಪರು ಪರೀಕ್ಷೆಗೆ ಹೆದರಿಕೆ ಏಕೆ ?
‘‘ವಿನಾಯಕ ಬಾಳಿಗಾ ಹತ್ಯೆ ಪ್ರಕರಣದಲ್ಲಿ ತಾನು ಯಾವ ತಪ್ಪು ಮಾಡಿಲ್ಲ ಎಂದು ಹೇಳಿಕೆ ನೀಡುತ್ತಿರುವವರಿಗೆ ಮಂಪರು ಪರೀಕ್ಷೆಯ ಬಗ್ಗೆ ಭಯವೇಕೆ ? ಬಾಳಿಗಾ ಪ್ರಕರಣದ ತನಿಖೆಯ ಒಂದು ಹಂತದ ಬಳಿಕ ಬಹುತೇಕ ಸ್ಥಗಿತಗೊಂಡ ಸ್ಥಿತಿಯಲ್ಲಿದೆ. ಆದ್ದರಿಂದ ತನಿಖೆ ಮುಂದುವರಿದು ಪೂರ್ಣಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಮಂಪರು ಪರೀಕ್ಷೆಗೆ ಮರು ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದೇವೆ. ಸೆಲ್ವಿ ವರ್ಸಸ್ ಕರ್ನಾಟಕ ಪ್ರಕರಣದ ಆದೇಶವನ್ನು ಮುಂದಿಟ್ಟು ಈ ಪ್ರಕರಣದಲ್ಲಿ ಮಂಪರು ಪರೀಕ್ಷೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿಲ್ಲ. ಆದರೆ ಈ ಹಿಂದೆ ಶೀನಾ ಬೋರಾ ಪ್ರಕರಣವೊಂದರಲ್ಲಿ ಮಂಪರು ಪರೀಕ್ಷೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಉದಾಹರಣೆ ಇದೆ. ವಿನಾಯಕ ಬಾಳಿಗಾರ ಬರ್ಬರ ಹತ್ಯೆ ಪ್ರಕರಣದ ಸಮರ್ಪಕ ತನಿಖೆ ಇನ್ನೂ ನಡೆದಿಲ್ಲ. ಮರು ತನಿಖೆ ನಡೆಯಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದೇವೆ. ಮರು ತನಿಖೆ ಏಕೆ ಎಂದು ನ್ಯಾಯಾಲಯ ಕೇಳಿದೆ. ಈ ವಿಚಾರವನ್ನು ನಾವು ನ್ಯಾಯಾಲಯಕ್ಕೆ ಮನವರಿಕೆ ಮಾಡಬೇಕಾಗಿದೆ ಎಂದು ವಿನಾಯಕ ಬಾಳಿಗಾ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸುತ್ತಿರುವ ನರೇಂದ್ರ ನಾಯಕ್ ತಿಳಿಸಿದ್ದಾರೆ.
ವಿನಾಯಕ ಬಾಳಿಗಾ ಕೊಲೆ ಪ್ರಕರಣ
ಸಾಮಾಜಿಕ ಕಾರ್ಯಕರ್ತ ಹಾಗೂ ಮಾಹಿತಿ ಹಕ್ಕು ಹೋರಾಟಗಾರರಾಗಿದ್ದ ವಿನಾಯಕ ಪಾಂಡುರಂಗ ಬಾಳಿಗಾರನ್ನು 2016ರ ಮಾರ್ಚ್ 21ರಂದು ಅವರ ನಿವಾಸದ ಬಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಮಂಗಳೂರಿನ ರಥಬೀದಿಯಲ್ಲಿದ್ದ ಕಾಶಿ ಮಠ ಸಂಸ್ಥಾನದ ಆಡಳಿತಕ್ಕೆ ಒಳಪಟ್ಟ ಶ್ರೀ ವೆಂಕಟ್ರಮಣ ದೇವಸ್ಥಾನದ ಹಣಕಾಸಿಗೆ ಸಂಬಂಧಿಸಿ ಅವ್ಯವಹಾರ ನಡೆದಿರುವ ಬಗ್ಗೆ ವಿನಾಯಕ ಬಾಳಿಗಾ ಪ್ರಶ್ನಿಸಿದ್ದರು. ಈ ವಿಚಾರವಾಗಿ ಅವರು ನ್ಯಾಯಾಲಯದ ಮೊರೆ ಕೂಡಾ ಹೋಗಿದ್ದರು. ಇದಾದ ಕೆಲವೇ ದಿನಗಳಲ್ಲಿ ಅವರ ಬರ್ಬರ ಹತ್ಯೆಯಾಗಿತ್ತು. ಆಗ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಚಂದ್ರಶೇಖರ್ ನೇತೃತ್ವದಲ್ಲಿ ರಚಿಸಿದ ತನಿಖಾ ತಂಡವು ನಮೋ ಬ್ರಿಗ್ರೇಡ್ನ ಮುಖಂಡ ನರೇಶ್ ಶೆಣೈಯನ್ನು ಪ್ರಮುಖ ಆರೋಪಿಯಾಗಿ ಗುರುತಿಸಿ ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. ಆ ಸಂದರ್ಭ ಶ್ರೀ ವೆಂಕಟ್ರಮಣ ದೇವಳ ಹಾಗೂ ಕಾಶಿ ಸಂಸ್ಥಾನ ಮಠದ ಸಕ್ರಿಯ ಸ್ವಯಂಸೇವಕನಾಗಿದ್ದ ನರೇಶ್ ತಲೆ ಮರೆಸಿಕೊಂಡಿದ್ದ. ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು. ಆನಂತರ ನರೇಶ್ ನ್ಯಾಯಾಲಯದಿಂದ ಶರತ್ತು ಬದ್ಧ ಜಾಮೀನು ಪಡೆದು ಹೊರಬಂದಿದ್ದಾನೆ.







