ಜಯಂತಿ ಆಚರಣೆ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸಬೇಡಿ: ಎಂ.ಸಿ ನಾಣಯ್ಯ
'ಕೊಡಗು ಪ್ರಿನ್ಸಿಪಾಲಿಟಿ ಮತ್ತು ಬ್ರಿಟಿಷ್ ಎಂಪಾಯರ್' ಪುಸ್ತಕ ಬಿಡುಗಡೆ

ಮಡಿಕೇರಿ, ಅ.30: ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಯಾವುದೇ ರಾಜರ ಜಯಂತಿ ಆಚರಣೆ ಮಾಡಬಾರದು ಎಂದು ಅಭಿಪ್ರಾಯಪಟ್ಟಿರುವ ಮಾಜಿ ಕಾನೂನು ಸಚಿವ ಎಂ.ಸಿ.ನಾಣಯ್ಯ, ಟಿಪ್ಪು ಜಯಂತಿಯನ್ನು ಬೇಕಾದವರು ಆಚರಿಸಿಕೊಳ್ಳಲಿ, ಆದರೆ ಜಯಂತಿ ಆಚರಣೆ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸಿ ಅಮಾಯಕರಿಗೆ ತೊಂದರೆ ನೀಡುವುದು ಸರಿಯಾದ ಕ್ರಮವಲ್ಲವೆಂದು ತಿಳಿಸಿದ್ದಾರೆ.
ಕೊಡವ ಮಕ್ಕಡ ಕೂಟದ ವತಿಯಿಂದ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ಮೂಕೊಂಡ ನಿತಿನ್ ಕುಶಾಲಪ್ಪ ಬರೆದಿರುವ ಕೊಡಗು ಪ್ರಿನ್ಸಿಪಾಲಿಟಿ ಮತ್ತು ಬ್ರಿಟಿಷ್ ಎಂಪಾಯರ್ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಟಿಪ್ಪು ಜಯಂತಿ ಆಚರಣೆ ಕೊಡಗಿನವರಿಗೆ ಬೇಡವೆಂದಾದಲ್ಲಿ ವಿಧಾನಸಭೆಯಲ್ಲಿ ನಿರ್ಣಯ ಮಾಡಲಿ. ಅದನ್ನು ಹೊರತು ಪಡಿಸಿ ಪರ, ವಿರೋಧ ನಿರ್ಣಯದಿಂದ ಸಮಾಜದ ಸ್ವಾಸ್ಥ್ಯ ಕೆಡಿಸುವುದು ಒಳ್ಳೆಯ ಬೆಳವಣಿಗೆ ಅಲ್ಲವೆಂದು ನಾಣಯ್ಯ ಹೇಳಿದರು.
ಟಿಪ್ಪು ಜಯಂತಿ ವಿಚಾರದಲ್ಲಿ ಕೊಡವರ ಭಾವನೆಗಳನ್ನು ಅರ್ಥೈಸಿಕೊಂಡು ಸರ್ಕಾರದ ಮಟ್ಟದಲ್ಲಿಯೇ ಉತ್ತಮ ನಿರ್ಧಾರ ಕೈಗೊಳ್ಳಬೇಕಾಗಿದೆ. ಒಂದು ವೇಳೆ ಟಿಪ್ಪುವಿನ ಜಯಂತಿ ಆಚರಿಸುವುದು ಬೇಡ ಎಂದು ನಿರ್ಧರಿಸಿ ಬಿಟ್ಟರೆ ಮತ್ತೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಸದಾ ಶಾಂತಿ, ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿರುವ ಕೊಡಗಿನಲ್ಲಿ ಅಮಾಯಕರನ್ನು ಬಳಸಿಕೊಂಡು ಟಿಪ್ಪು ಜಯಂತಿ ವಿಚಾರವಾಗಿ ಪ್ರತಿಭಟನೆ ನಡೆಸುವುದು ಸರಿಯಲ್ಲವೆಂದು ನಾಣಯ್ಯ ಕಿವಿಮಾತು ಹೇಳಿದರು.
ಪುಸ್ತಕಗಳನ್ನು ಓದಿ
ಪ್ರಸ್ತುತ ದಿನಗಳಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಯಾವ ಭಾಷೆಯ ಪುಸ್ತಕವಾದರು ಅದನ್ನು ಓದಿ ಅರ್ಥೈಸಿಕೊಳ್ಳುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಒಂದು ಪುಸ್ತಕವನ್ನು ಖರೀದಿಸಿದರೆ ಅದನ್ನು ಓದಿ ಅರ್ಥೈಸಿಕೊಳ್ಳಬೇಕು. ಇಲ್ಲದಿದ್ದರೆ ಆ ಪುಸ್ತಕಕ್ಕೆ ನಾವು ಅಪಚಾರ ಮಾಡಿದಂತೆ ಎಂದು ನಾಣಯ್ಯ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ದೇಶ ಭಕ್ತಿಗೆ ಹೆಸರಾದ ಕೊಡಗು ಜಿಲ್ಲೆಯಲ್ಲಿ ದೇಶ ಭಕ್ತರ ಜಯಂತಿ ಆಚರಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಲೇಖಕ ಮೂಕೊಂಡ ನಿತಿನ್ ಕುಶಾಲಪ್ಪ ಮಾತನಾಡಿ, ಕೊಡಗಿನ ಇತಿಹಾಸ ಹಾಗೂ ಸಂಸ್ಕೃತಿಯ ಬಗ್ಗೆ ಪುಸ್ತಕ ರಚಿಸುವ ಔಚಿತ್ಯದ ಬಗ್ಗೆ ವಿವರಿಸಿದರು. 2013ರಲ್ಲಿ ಬರೆದ ಪುಸ್ತಕದಲ್ಲಿ ಕೊಡಗಿನ ಇತಿಹಾಸದ ಬಗ್ಗೆ ಉಲ್ಲೇಖಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಉಪಸ್ಥಿತರಿದ್ದರು.







