ಸಂಚಾರ ನಿಯಮ ಪಾಲಿಸದವರು...
ಮಾನ್ಯರೇ,
ಮಂಗಳೂರು ನಗರದೊಳಗೆ ಅಲ್ಲಲ್ಲಿ ಎಷ್ಟೋ ಆಟೋರಿಕ್ಷಾ ತಂಗುದಾಣಗಳಿವೆ. ಕೆಲವು ಕಡೆ ಇಂತಹ ತಂಗುದಾಣಗಳಿದ್ದರೂ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಕೆಲವು ಅಗಲ ಕಿರಿದಾದ ಮತ್ತು ಏಕಮುಖ ಸಂಚಾರ ವ್ಯವಸ್ಥೆಯಿರುವ ರಸ್ತೆಗಳಲ್ಲಿ ಇಂತಹ ತಂಗುದಾಣಗಳಿಂದಾಗಿ ತುಂಬಾ ತೊಂದರೆಯಾಗುತ್ತದೆ.
ಉದಾಹರಣೆಗೆ ರೈಲು ನಿಲ್ದಾಣಕ್ಕೆ ಹೋಗುವ ಏಕಮುಖ ರಸ್ತೆ, ಮಿಲಾಗ್ರಿಸ್ ಕ್ರಾಸ್ ರಸ್ತೆ, ಬಲ್ಮಠ ಶಾಂತಿನಿಲಯಕ್ಕೆ, ಚರ್ಚ್‌ಗೆ ಹೋಗುವ ರಸ್ತೆ, ಬಲ್ಮಠ ಪೆಟ್ರೋಲ್ ಬಂಕ್‌ನಿಂದ ಬಸ್ಸು ನಿಲ್ದಾಣದ ತನಕ ಎಲ್ಲೆಡೆ ಕ್ರಮವಿಲ್ಲದ ಅಸ್ತವ್ಯಸ್ತ ರಿಕ್ಷಾ ಸಂಚಾರವೇ ಕಾಣುತ್ತಿದೆ. ಏಕಮುಖ ಸಂಚಾರವಿರುವ ರೈಲು ನಿಲ್ದಾಣ ರಸ್ತೆ ಮತ್ತು ಮಿಲಾಗ್ರಿಸ್ ಕ್ರಾಸ್ ರಸ್ತೆಗಳಲ್ಲಿ ‘ನೋ ಎಂಟ್ರಿ’ ಎಂಬ ಬೋರ್ಡ್ ಹಾಕಲಾಗಿದ್ದರೂ ರಿಕ್ಷಾ ಚಾಲಕರು ಗಣನೆಗೆ ತೆಗೆದುಕೊಳ್ಳದೆ ಅಸ್ತವ್ಯಸ್ತ ಸಂಚಾರ ನಡೆಸಿ ಗೊಂದಲಕ್ಕೆ ಕಾರಣರಾಗುತ್ತಾರೆ. ಇಂತಹ ಕ್ರಮವಿಲ್ಲದ ರಿಕ್ಷಾ ಸಂಚಾರದಿಂದಾಗಿ ಇತರ ವಾಹನ ಸವಾರರಿಗೆ, ಪಾದಚಾರಿಗಳಿಗೆ ತುಂಬಾ ತೊಂದರೆಯಾಗುತ್ತದೆ.
ಅಲ್ಲದೆ ಬಲ್ಠಠ ಪೆಟ್ರೋಲ್ ಬಂಕ್ ರಸ್ತೆಯ ಅವ್ಯವಸ್ಥೆ ದಿನೇ ದಿನೇ ಹದಗೆಡುತ್ತಿದೆ. ರಿಕ್ಷಾ ತಂಗುದಾಣವಿರುವುದು ಶಾಂತಿ ನಿಲಯ ರಸ್ತೆಯಲ್ಲಿ, ಆದರೆ ಪೆಟ್ರೋಲ್ ಬಂಕ್ ಎದುರು ರಿಕ್ಷಾ ನಿಲ್ಲಿಸಿ ಅಲ್ಲಿಯೇ ಜನರನ್ನು ತುಂಬಿಸಿ ಸಾಗುವುದು ಅಕ್ರಮವಲ್ಲವೇ? ಟ್ರಾಫಿಕ್ ಪೊಲೀಸರು ಇಂತಹ ಅವ್ಯವಸ್ಥೆಯನ್ನು ಕೂಡಲೇ ನಿಯಂತ್ರಿಸಬೇಕಾಗಿದೆ.





