ಖಲೀಲ್ ಅಹ್ಮದ್‌ಗೆ ಐಸಿಸಿ ಛೀಮಾರಿ

ಮುಂಬೈ, ಅ.30: ನಾಲ್ಕನೇ ಏಕದಿನ ಪಂದ್ಯದಲ್ಲಿ ವಿಂಡೀಸ್ ದಾಂಡಿಗ ಮರ್ಲಾನ್ ಸ್ಯಾಮುಯೆಲ್ಸ್‌ರನ್ನು ಔಟ್ ಮಾಡಿದ ಬಳಿಕ ಅನುಚಿತವಾಗಿ ವರ್ತಿಸಿದ ಭಾರತದ ಎಡಗೈ ವೇಗದ ಬೌಲರ್ ಖಲೀಲ್ ಅಹ್ಮದ್‌ಗೆ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಮಂಗಳವಾರ ಛೀಮಾರಿ ಹಾಕಿದೆ. ಭಾರತದ ಯುವ ಬೌಲರ್‌ಗೆ ಅಧಿಕೃತ ಎಚ್ಚರಿಕೆ ನೀಡಿ, ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.
ಖಲೀಲ್ ಅಹ್ಮದ್ ಸೋಮವಾರ ವಿಂಡೀಸ್ ವಿರುದ್ಧದ 4ನೇ ಏಕದಿನ ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆ ಲೆವೆಲ್-1ನ್ನು ಉಲ್ಲಂಘಿಸಿರುವುದು ಕಂಡುಬಂದ ಕಾರಣ ಅವರಿಗೆ ಅಧಿಕೃತ ಎಚ್ಚರಿಕೆ ಹಾಗೂ ಒಂದು ಡಿಮೆರಿಟ್ ಅಂಕ ನೀಡಲಾಗಿದೆ ಎಂದು ಐಸಿಸಿ ತಿಳಿಸಿದೆ. ಅಹ್ಮದ್ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ 13 ರನ್‌ಗೆ 3 ವಿಕೆಟ್‌ಗಳನ್ನು ಉರುಳಿಸಿದ್ದರು. ವೆಸ್ಟ್‌ಇಂಡೀಸ್ ರನ್ ಚೇಸಿಂಗ್ ಮಾಡುತ್ತಿದ್ದಾಗ 14ನೇ ಓವರ್‌ನಲ್ಲಿ ಔಟ್ ಸ್ವಿಂಗ್ ಮೂಲಕ ಮರ್ಲಾನ್ ಸ್ಯಾಮುಯೆಲ್ಸ್ ವಿಕೆಟ್ ಉಡಾಯಿಸಿದ್ದರು. ಪೆವಿಲಿಯನ್‌ನತ್ತ ತೆರಳುತ್ತಿದ್ದ ಸ್ಯಾಮುಯೆಲ್ಸ್ ಬಳಿ ತೆರಳಿದ ಖಲೀಲ್ ಕೆರಳಿಸುವ ರೀತಿಯಲ್ಲಿ ವರ್ತಿಸಿದ್ದರು. ಇದನ್ನು ಗಮನಿಸಿದ ಫೀಲ್ಡ್ ಅಂಪೈರ್‌ಗಳು , ಖಲೀಲ್ ತನ್ನ ವರ್ತನೆಯ ಮೂಲಕ ವಿಂಡೀಸ್ ಆಟಗಾರನನ್ನು ಕೆರಳಿಸಲು ಯತ್ನಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಂದ್ಯ ಮುಗಿದ ಬಳಿಕ ತನ್ನ ತಪ್ಪನ್ನು ಒಪ್ಪಿಕೊಂಡಿರುವ ಖಲೀಲ್ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ನೀಡಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ.





