ವಿಕಲಚೇತನರಿಗೆ ಮತದಾನ ಮಾಡಲು ವಾಹನ ಸೌಲಭ್ಯ: ಶಿವಮೊಗ್ಗ ಜಿಲ್ಲಾಧಿಕಾರಿ ದಯಾನಂದ
ಮತದಾರರ ಜಾಗೃತಿ ಜಾಥಾ

ಶಿವಮೊಗ್ಗ, ಅ. 31: ಈ ಬಾರಿ ಚುನಾವಣೆಯಲ್ಲಿ ನಡೆದಾಡಲು ಕಷ್ಟಪಡುವ ಅರ್ಹ ವಿಕಲಚೇತನರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಲು ಸಾಧ್ಯವಾಗುವಂತೆ ಜಿಲ್ಲಾಡಳಿತದ ವತಿಯಿಂದ ವಾಹನ ಸೌಲಭ್ಯ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ತಿಳಿಸಿದರು.
ಅವರು ಬುಧವಾರ ಜಿಲ್ಲಾ ಪಂಚಾಯತ್ ಆವರಣದಲ್ಲಿ ಮತದಾರರ ಜಾಗೃತಿಗೆ ವಿಕಲಚೇತನರು ಹಮ್ಮಿಕೊಂಡಿದ್ದ ತ್ರಿಚಕ್ರ ವಾಹನ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮತದಾನದ ಪ್ರಮಾಣ ಹೆಚ್ಚಾದಷ್ಟು ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯ. ಮತದಾನ ನೀರಸವಾದಷ್ಟು ಪ್ರಜಾಪ್ರಭುತ್ವ ಸಹ ದುರ್ಬಲವಾಗುತ್ತಾ ಹೋಗುತ್ತದೆ. 18ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಕೇವಲ ದೈಹಿಕವಾಗಿ ಶಕ್ತರು ಮಾತ್ರವಲ್ಲದೆ, ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂಬ ಉದ್ದೇಶದಿಂದ ವಿಕಲಾಂಗ ಮತದಾರರ ಮತದಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ.
ಈ ಬಾರಿ ಇದೇ ಮೊದಲ ಬಾರಿಗೆ ಅರ್ಹ ವಿಕಲಾಂಗ ಮತದಾರರನ್ನು ಮತಗಟ್ಟೆಗಳಿಗೆ ಕರೆತಂದು ಮತದಾನದ ಬಳಿಕ ಮತ್ತೆ ಮನೆಗೆ ಕರೆದುಕೊಂಡು ಹೋಗಲು ವಾಹನದ ವ್ಯವಸ್ಥೆಯನ್ನು ಕಲ್ಪಿಸಲು ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಇದರಂತೆ ಶಿವಮೊಗ್ಗ ಜಿಲ್ಲೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕಾಗಿ ನೋಡಲ್ ಅಧಿಕಾರಿ ನೇಮಕ ಮಾಡಲಾಗುತ್ತಿದ್ದು, ಅವರ ದೂರವಾಣಿ ಸಂಖ್ಯೆಯನ್ನು ಪ್ರಕಟಿಸಲಾಗುವುದು. ಅರ್ಹ ವಿಕಲಚೇತನರು ಇದರ ಸೌಲಭ್ಯ ಬಳಸಿಕೊಂಡು ಮತದಾನ ಮಾಡುವಂತೆ ಅವರು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇಗೌಡ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಗಿಂತ ಉತ್ತಮ ಆಡಳಿತ ವ್ಯವಸ್ಥೆ ಬೇರೊಂದಿಲ್ಲ. ಈ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಜನಪ್ರತಿನಿಧಿಗಳಾಗಿ ಆಯ್ಕೆಯಾಗುವ ಅವಕಾಶವಿದೆ. ಪ್ರತಿಯೊಬ್ಬರೂ ತಮಗೆ ದೊರೆತಿರುವ ಮತದಾನದ ಹಕ್ಕನ್ನು ಚಲಾಯಿಸಿ ತಮಗೆ ಬೇಕಾದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಆವರಣದಿಂದ ಆರಂಭವಾದ ಜಾಥಾ ಶಿವಮೂರ್ತಿ ಸರ್ಕಲ್, ಡಿ.ಸಿ.ಆಫಿಸ್ ಸರ್ಕಲ್, ಬಿ.ಎಚ್.ರಸ್ತೆ, ಅಮೀರ್ ಅಹ್ಮದ್ ಸರ್ಕಲ್, ಬಸ್ಟಾಂಡ್ ಸರ್ಕಲ್, ಗೋಪಿ ಸರ್ಕಲ್ ಸೇರಿದಂತೆ ಪ್ರಮುಖ ವೃತ್ತಗಳ ಮೂಲಕ ಹಾದು ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಷಪ್ಪ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.







