ಮರಳು ಸಮಸ್ಯೆ ವಿರೋಧಿಸಿ ನ.10ರಂದು ಉಡುಪಿ ಜಿಲ್ಲೆ ಬಂದ್
ಮರಳಿಗಾಗಿ ಹೋರಾಟ ಸಮಿತಿ ನಿರ್ಧಾರ

ಉಡುಪಿ, ಅ.31: ಜಿಲ್ಲೆಯ ಸಿಆರ್‌ಝೆಡ್ ಹಾಗೂ ನಾನ್‌ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಅವಕಾಶ ನೀಡುವವರೆಗೆ ಅಹೋರಾತ್ರಿ ಧರಣಿ ಮುಂದುವರೆಸಲಾಗುವುದು ಮತ್ತು ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನ.10ರಂದು ಉಡುಪಿ ಜಿಲ್ಲೆ ಬಂದ್‌ಗೆ ಕರೆ ನೀಡಲಾಗುವುದು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಮರಳು ಹೋರಾಟ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿರುವ ಅನಿಧಿಷ್ಟಾವಧಿ ಅಹೋರಾತ್ರಿ ಧರಣಿ ಯಲ್ಲಿ ಏಳನೆ ದಿನವಾದ ಬುಧವಾರ ನಡೆಸಿದ ಸಂಘಟನೆಗಳ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಈ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೆ ಪೂರ್ಣ ಪ್ರಮಾಣ ದಲ್ಲಿ ಮರಳುಗಾರಿಕೆ ಪ್ರಾರಂಭವಾಗುವವರೆಗೆ ಮುಂದುವರೆಸಲಾಗುವುದು. ನ.8ರವರೆಗೆ ನೀತಿ ಸಂಹಿತೆ ಹಾಗೂ ಹಬ್ಬ ಇರುವುದರಿಂದ ನ.10ರಂದು ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಎಚ್ಚರಿಸಲು ಎಲ್ಲ ಸಂಘಟನೆಗಳ ಸಹ ಕಾರದೊಂದಿಗೆ ಉಡುಪಿ ಜಿಲ್ಲೆ ಬಂದ್ ಮಾಡಲಾಗುವುದು. ನ.10ರ ನಂತರ ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿ ಲಾರಿ, ಕ್ರಷರ್, ಕಟ್ಟಡ ಸಾಮಗ್ರಿ ಸೇರಿದಂತೆ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸುವ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದರು.
ಸಿಎಂ ಹಠಮಾರಿತನ: ಮರಳಿನ ಸಮಸ್ಯೆಗೆ ಕೇಂದ್ರ ಹೊಣೆ ಎಂಬ ಹೇಳಿಕೆಯು ರಾಜ್ಯದ ಮುಖ್ಯಮಂತ್ರಿಗಳಿಗೆ ಶೋಭೆ ತರುವಂತದಲ್ಲ. ಈ ವಿಚಾರದಲ್ಲಿ ರಾಜ್ಯ ಸರಕಾರ ಹಠಮಾರಿತನಕ್ಕೆ ಬಿದ್ದಂತೆ ಕಾಣುತ್ತಿದೆ. ಉಡುಪಿ ಜಿಲ್ಲಾಧಿಕಾರಿಯ ಎಸಿ ಕಚೇರಿಯನ್ನು ನಿಯಂತ್ರಣ ಮಾಡಲು ಆಗದ ಸ್ಥಿತಿ ರಾಜ್ಯ ಸರಕಾರಕ್ಕೆ ಬಂದಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ.
ಈ ಹೋರಾಟವನ್ನು ರಾಜ್ಯದ ಮುಖ್ಯಮಂತ್ರಿ ಮನೆಯವರೆಗೂ ಕೊಂಡೊಯ್ಯುವ ಚಿಂತನೆ ಕೂಡ ಮಾಡಲಾಗುತ್ತಿದೆ. ಮರಳಿನ ಸಮಸ್ಯೆ ಬಗೆಹರಿಯುವ ವರೆಗೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಗಳು ಇಲ್ಲಿನ ಸಮಸ್ಯೆ ಬಗೆಹರಿಸಬೇಕೇ ಹೊರತು ಹಠಮಾರಿತನ ಮಾಡ ಬಾರದು. ಅದರಿಂದ ಮುಖ್ಯಮಂತ್ರಿಗಳು ಅದರಿಂದ ಹೊರಬರಬೇಕು ಎಂದು ಅವರು ಒತ್ತಾಯಿಸಿದರು.
ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಹೊಗೆ ದೋಣಿ ಕಾರ್ಮಿಕ ಸಂಘದ ಅಧ್ಯಕ್ಷ ಸುಧಾಕರ್ ಅಮೀನ್, ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಮರಳಿಗಾಗಿ ಹೋರಾಟ ಸಮಿತಿಯ ಸಂಚಾಲಕ ಎಂ.ಜಿ.ನಾಗೇಂದ್ರ, ಪಿಡಬ್ಲುಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಅಲೆವೂರು ಶ್ರೀಧರ್ ಶೆಟ್ಟಿ, ಉಡುಪಿ ಇಂಜಿನಿಯರ್ ಅಸೋಸಿಯೇಶನ್‌ನ ಗೋಪಾಲ ಭಟ್, ಲಾರಿ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಪ್ರವೀಣ್ ಸುವರ್ಣ, ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಕೃಷ್ಣರಾಜ ಕೊಡಂಚ ಮೊದಲಾದವರು ಉಪಸ್ಥಿತರಿದ್ದರು.
ಕೇಂದ್ರದ ವಿರುದ್ಧವೂ ಹೋರಾಟ: ಭಟ್
ಜಿಲ್ಲಾಡಳಿತದ ಅಂಗಳದಲ್ಲಿದ್ದ ಈ ಸಮಸ್ಯೆಯನ್ನು ರಾಜ್ಯ ಸರಕಾರ ಅ. 25 ರಂದು ಪತ್ರ ಬರೆಯುವ ಮೂಲಕ ಕೇಂದ್ರ ಸರಕಾರದ ಅಂಗಳಕ್ಕೆ ಹಾಕಿದೆ. ಮರಳುಗಾರಿಕೆ ಪ್ರಾರಂಭವಾಗದಂತೆ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗುತ್ತಿದೆ. ಇದರ ವಿರುದ್ಧ ನ.10ರಿಂದ ಉಗ್ರ ಹೋರಾಟ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರವನ್ನು ಮಣಿಸದೆ ಈ ಹೋರಾಟವನ್ನು ಕೈಬಿಡಲ್ಲ. ಮರಳುಗಾರಿಕೆ ಕುರಿತು ಕೇಂದ್ರ ಸರಕಾರದಿಂದ ವ್ಯತಿರಿಕ್ತ ಆದೇಶ ಬಂದರೂ ಅದರ ವಿರುದ್ಧವೂ ಹೋರಾಟ ನಡೆಸಲಾಗುವುದು ಎಂದು ಶಾಸಕ ಕೆ. ರಘುಪತಿ ಭಟ್ ಎಚ್ಚರಿಕೆ ನೀಡಿದರು.







