ಮಂಗಳೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಕೆಸಿಸಿಐ ಆಗ್ರಹ: ಪಿ.ಬಿ.ಅಬ್ದುಲ್ ಹಮೀದ್

ಮಂಗಳೂರು, ಅ.31: ಮಂಗಳೂರು ಅಭಿವೃದ್ಧಿಗೆ ವಿಮಾನ ನಿಲ್ದಾಣದ ರನ್ ವೇಯ ವಿಸ್ತರಣೆಗೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ತ್ವರಿತವಾಗಿ ಕ್ರಮಕೈಗೊಳ್ಳಬೇಕು ಎಂದು ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಕೆಸಿಸಿಐ) ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್ ಸುದ್ದಿಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.
ಮಂಗಳೂರು ಕೇಂದ್ರದ ವಾಣಿಜ್ಯ, ಕೈಗಾರಿಕೆ ಮತ್ತು ಪ್ರವಾಸೋದ್ಯಮ, ಐ.ಟಿ. ಕ್ಷೇತ್ರದ ಅಭಿವೃದ್ಧಿಗೆ ವಿಮಾನ ನಿಲ್ದಾಣದ ಅಭಿವೃದ್ಧಿ ಅಗತ್ಯವಾಗಿ ಆಗಬೇಕಾಗಿದೆ. ವಿಮಾನ ನಿಲ್ದಾಣದಲ್ಲಿ ಅಳವಡಿಸಿರುವ ಬೆಳಕಿನ ವ್ಯವಸ್ಥೆಯನ್ನು ಸುರಕ್ಷತೆಯ ದೃಷ್ಟಿಯಿಂದಲೂ ಮೇಲ್ದರ್ಜೆಗೇರಿಸಬೇಕಾಗಿದೆ. ವಿಮಾನ ನಿಲ್ದಾಣದ ವಿಸ್ತರಣೆಗೆ ಅಗತ್ಯವಾದ ಭೂಮಿಯನ್ನು ಒದಗಿಸಲು ರಾಜ್ಯ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಸಂಸ್ಥೆಯ ವತಿಯಿಂದ ಆಗ್ರಹಿಸುವುದಾಗಿ ಅಬ್ದುಲ್ ಹಮೀದ್ ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಿಂದ ಮಂಗಳೂರು ನಗರದ ನೆನೆಗುದಿಗೆ ಬಿದ್ದಿರುವ ಅಭಿವೃದ್ಧಿ ಯೋಜನೆಗಳು ಹೆಚ್ಚು ವೇಗವಾಗಿ ಅನುಷ್ಠಾನಕೊಳ್ಳಬಹುದು. ಈ ನಿಟ್ಟಿನಲ್ಲಿ ಸಂಸ್ಥೆ ಸರಕಾರವನ್ನು ಆಗ್ರಹಿಸುವುದಾಗಿ ಅಬ್ದುಲ್ ಹಮೀದ್ ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿಯೋಜನೆಯ ಮೂಲಕ ಮಂಗಳೂರು ಜಲ ಸಂಪರ್ಕದ ಪ್ರದೇಶಗಳ ಅಭಿವೃದ್ಧಿ, ಬಸ್ ನಿಲ್ದಾಣದ ಸ್ಥಳಾಂತರ, ಪಾರ್ಕಿಂಗ್ ವಲಯ ನಿರ್ಮಾಣ, ರೈಲು ಹಳಿ ಡಬಲಿಂಗ್, ರಸ್ತೆ, ಬಂದರು ಅಭಿವೃದ್ಧಿಯಾಗಲಿದೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯೂ ಆಗಲಿದೆ ಎಂದು ಅವರು ಹೇಳಿದರು.
ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿ ಮುಂದಿನ ಆರು ತಿಂಗಳ ಒಳಗೆ ಪೂರ್ಣಗೊಳ್ಳುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿರುವುದಾಗಿ ಅಬ್ದುಲ್ ಹಮೀದ್ ತಿಳಿಸಿದ್ದಾರೆ.
ಪ್ರವಾಸೋದ್ಯಮ ಅಭಿವೃದ್ಧಿ, ಐ.ಟಿ. ಕ್ಷೇತ್ರ, ಸಂಪರ್ಕ ರಸ್ತೆ, ಮಂಗಳೂರು-ಬೆಂಗಳೂರು ಸಂಪರ್ಕ ರಸ್ತೆ, ಮರಿಟೈಮ್ ಬೋರ್ಡ್, ಕೈಗಾರಿಕಾ ವಲಯಗಳ ಅಭಿವೃದ್ಧಿ ಯೋಜನೆಗಳನ್ನು ತ್ವರಿತವಾಗಿ ಹಮ್ಮಿಕೊಳ್ಳಲು ಸಂಸ್ಥೆ ಆಗ್ರಹಿಸುತ್ತಾ ಬಂದಿದೆ. ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ನವೆಂಬರ್ ತಿಂಗಳಲ್ಲಿ ಸಮಾಲೋಚನೆ ನಡೆಸಲಾಗುವುದು ಎಂದು ಅಬ್ದುಲ್ ಹಮೀದ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಉಪಾಧ್ಯಕ್ಷ ಐಸಾಕ್ ವಾಸ್, ಕಾರ್ಯದರ್ಶಿ ಪ್ರಶಾಂತ್ ಸಿ.ಜಿ, ಶಶಿಧರ ಪೈ ಮಾರೂರು, ಗಣೇಶ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.







