ನ.3ರ ಉಪಚುನಾವಣೆಗೆ ಸಕಲ ಸಿದ್ಧತೆ ಪೂರ್ಣ: ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್
54,54,275 ಮತದಾರರು, 6,453 ಮತಗಟ್ಟೆಗಳು

ಬೆಂಗಳೂರು, ಅ.31: ರಾಜ್ಯದಲ್ಲಿ ನ.3ರಂದು ನಡೆಯುವ ಜಮಖಂಡಿ, ರಾಮನಗರ ವಿಧಾನಸಭಾ ಕ್ಷೇತ್ರ ಹಾಗೂ ಬಳ್ಳಾರಿ, ಶಿವಮೊಗ್ಗ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಒಟ್ಟು 54.54ಲಕ್ಷ ಮತದಾರರಿದ್ದು, 6,453ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಮುಖ್ಯಚುನಾವಣಾಧಿಕಾರಿ ಸಂಜೀವ್‌ಕುಮಾರ್ ತಿಳಿಸಿದರು.
ಬುಧವಾರ ಚುನಾವಣಾ ಆಯೋಗದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆಗೆ ಸಂಬಂಧಿಸಿದಂತೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಒಟ್ಟು ಮತಗಟ್ಟೆಗಳಲ್ಲಿ 1502ಸೂಕ್ಷ್ಮ ಮತಗಟ್ಟೆ, 57ಪಿಂಕ್ ಮತಗಟ್ಟೆ, 26 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿರುವುದು ವಿಶೇಷವೆಂದು ತಿಳಿಸಿದರು.
ವೇತನ ಸಹಿತ ರಜೆ: ಮತದಾನ ನಡೆಯುವ ಕ್ಷೇತ್ರಗಳಲ್ಲಿ ಮತದಾರರಿಗೆ ವೇತನ ಸಹಿತ ರಜೆ ಘೋಷಿಸಲಾಗಿದೆ. ಮತದಾನವು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ನಡೆಯಲಿದೆ. ಇದೇ ಮೊದಲಬಾರಿಗೆ ವಿಶೇಷ ಚೇತನ ಮತದಾರರನ್ನು ಮನೆಯಿಂದ ಮತಗಟ್ಟೆಗೆ ಹಾಗೂ ಮತಗಟ್ಟೆಯಿಂದ ಮನೆಗೆ ಕರೆದೊಯ್ಯಲು ಉಚಿತ ಸಾರಿಗೆ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ ಎಂದು ಅವರು ಹೇಳಿದರು.
ಅಭ್ಯರ್ಥಿಗಳ ಚುನಾವಣಾ ವೆಚ್ಚಗಳ ಬಗ್ಗೆ ನಿಗಾ ಇಡಲು ಒಟ್ಟು 273 ಸ್ಥಿರ ಕಣ್ಗಾವಲು ತಂಡ ರಚಿಸಲಾಗಿದೆ. 168 ಫ್ಲೈಯಿಂಗ್ ಸ್ಕ್ವಾಡ್, 98 ಛಾಯಾಗ್ರಹಣ ಪರಿವೀಕ್ಷಣಾ ತಂಡ, 28 ಲೆಕ್ಕಪತ್ರ ನಿರ್ವಹಣಾ ತಂಡ ಹಾಗೂ 142 ಜಿಲ್ಲಾದ್ಯಂತ ಚೆಕ್ ಪೋಸ್ಟ್‌ಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.
ಚುನಾವಣಾ ನೀತಿ ಸಂಹಿತೆಯಡಿ ಇಲ್ಲಿಯವರೆಗೆ 60,508 ಲೀಟರ್ ಮದ್ಯ, 1.4 ಕೆಜಿ ಮಾದಕ ವಸ್ತುಗಳು ಹಾಗೂ 8022 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 392ಗೋಡೆ ಬರವಣಿಗೆ, 2156ಪೋಸ್ಟರ್, 2283ಬ್ಯಾನರ್ ಸೇರಿ ಒಟ್ಟು 5867 ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮತ ಎಣಿಕೆ ಕೇಂದ್ರಗಳು: -ಬಳ್ಳಾರಿ ಲೋಕಸಭಾ ಕ್ಷೇತ್ರ-ರಾವ್ ಬಹುದ್ದೂರ್ ವೈ ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜು, ಬಳ್ಳಾರಿ.
-ಶಿವಮೊಗ್ಗ ಲೋಕಸಭಾ ಕ್ಷೇತ್ರ-ಸಹ್ಯಾದ್ರಿ ಆರ್ಟ್ಸ್ ಕಾಲೇಜು-ಶಿವಮೊಗ್ಗ
-ಮಂಡ್ಯ ಲೋಕಸಭಾ ಕ್ಷೇತ್ರ-ಸರಕಾರಿ ಕಾಲೇಜು, ಮಂಡ್ಯ
-ಜಮಖಂಡಿ ವಿಧಾನಸಭಾ-ಮಿನಿ ವಿಧಾನಸೌಧ, ಜಮಖಂಡಿ
-ರಾಮನಗರ ವಿಧಾನಸಭಾ ಕ್ಷೇತ್ರ-ರಾಮನಗರ ಸರಕಾರಿ ಪ್ರಥಮ ದರ್ಜೆ ಕಾಲೇಜು.
-9822 ಬ್ಯಾಲೆಟ್ ಯುನಿಟ್‌ಗಳು, 8438ಕಂಟ್ರೋಲ್ ಯುನಿಟ್‌ಗಳು ಹಾಗೂ 8922ವಿವಿಪ್ಯಾಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ.
-1779 ಸೇವಾ ಮತದಾರರು ಹಾಗೂ 51,131ವಿಶೇಷ ಚೇತನ ಮತದಾರರು.
-ಇದೇ ಮೊದಲ ಬಾರಿಗೆ ವಿಶೇಷ ಚೇತನರಿಗೆ ಪಿಕಪ್ ಮತ್ತು ಡ್ರಾಪ್ ಸಾರಿಗೆ ಸೌಲಭ್ಯವಿದೆ.
-57ಪಿಂಕ್ ಮತಕೇಂದ್ರಗಳು ಹಾಗೂ 26ವಿಶೇಷ ಚೇತನರ ನಿರ್ವಹಣ ಮತದಾನ ಕೇಂದ್ರ.







