ಪ್ರಗತಿಪರರು ಕ್ರಿಯೆಯಲ್ಲಿ ಸಕ್ರಿಯವಾಗಲಿ: ನಿವೃತ್ತ ನ್ಯಾ.ನಾಗಮೋಹನ ದಾಸ್
ಸಂವಿಧಾನ ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಿ ಕುರಿತು ದುಂಡು ಮೇಜಿನ ಸಭೆ

ಬೆಂಗಳೂರು, ಅ.31: ಪ್ರಗತಿಪರರು ಮಾತನಾಡುವುದಕ್ಕಿಂತ ಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗುವ ಮೂಲಕ ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ನಿವೃತ್ತ ನ್ಯಾ.ನಾಗಮೋಹನ ದಾಸ್ ಅಭಿಪ್ರಾಯಿಸಿದರು.
ಬುಧವಾರ ನಗರದ ಯುವಿಸಿಇ ಅಲ್ಯೂಮ್ನಿ ಅಸೋಷಿಯೇಷನ್‌ನಲ್ಲಿ ಆಯೋಜಿಸಿದ್ದ ಬಹುತ್ವದ ಭಾರತಕ್ಕಾಗಿ ಸಂವಿಧಾನ ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಿ ಕುರಿತು ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ದುಂಡು ಮೇಜಿನ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇವತ್ತಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಆಗುಹೋಗುಗಳನ್ನು ತಿಳಿಯಲು ಜನತೆ ಉತ್ಸುಕರಾಗಿದ್ದಾರೆ. ಆದರೆ, ಅವರಿಗೆ ಮೌಲ್ಯಯುತವಾದ ವಿಚಾರಗಳನ್ನು ತಿಳಿಸಲು ಪ್ರಗತಿಪರ ಸಂಘಟನೆಗಳು ಹಿಂದೆ ಬಿದ್ದಿವೆ. ಈ ಕಾರಣದಿಂದಾಗಿ ಕೋಮುವಾದಿಗಳು ತಮ್ಮ ಮನುಷ್ಯ ವಿರೋಧಿ ವಿಚಾರಗಳನ್ನು ಹರಡುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಪ್ರಗತಿಪರರ ಮಾತನಾಡುವುದು, ಭಾಷಣ ಮಾಡುವುದಕ್ಕಿಂತ ಕ್ರಿಯೆಯಲ್ಲಿ ತೊಡಗಬೇಕೆಂದು ಅವರು ಆಶಿಸಿದರು.
ಕಳೆದ ಆಗಸ್ಟ್‌ನಲ್ಲಿ ಸಂವಿಧಾನ ಓದು ಪುಸ್ತಕ ಬಿಡುಗಡೆಯಾಯಿತು. ಇಲ್ಲಿಯವರೆಗೂ 36 ಸಾವಿರ ಪ್ರತಿಗಳು ಮಾರಾಟವಾಗಿವೆ. ಹಾಗೂ ಆಗಸ್ಟ್‌ನಿಂದ ಇಲ್ಲಿಯವರೆಗೂ ಹತ್ತು ಜಿಲ್ಲೆಗಳಲ್ಲಿ ತಿರುಗಾಡಿ ಅಲ್ಲಿನ ಕಾಲೇಜುಗಳಿಗೆ ಹೋಗಿ ಸಂವಿಧಾನದ ಕುರಿತು ಮಾತನಾಡಿ, ಸಂವಾದ ನಡೆಸಿದ್ದೇನೆ. ಈ ವೇಳೆ ವಿದ್ಯಾರ್ಥಿಗಳಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘಪರಿವಾರದ ಸಂಘಟನೆಗಳು ವಿದ್ಯಾರ್ಥಿಗಳ ಮನಸಿನಲ್ಲಿ ಕೋಮುವಾದಿ ವಿಚಾರಗಳನ್ನು ಬಿತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಕಾಲೇಜುಗಳಲ್ಲಿ ಸಂವಿಧಾನದ ಕುರಿತು ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳಿಂದ ಮೀಸಲಾತಿ, ರಾಷ್ಟ್ರಿಯತೆ, ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನದ ಕುರಿತು ಪ್ರಶ್ನೆಗಳನ್ನು ಕೇಳಿದರು. ಈ ವೇಳೆ ಅವರಿಗೆ ಸಮರ್ಪಕ ಉತ್ತರಗಳನ್ನು ನೀಡಿದಾಗ ಖುಷಿ ಪಟ್ಟು, ನನ್ನ ಕೈ ಕುಲುಕಿದರು. ಇದೇ ಮಾದರಿಯಲ್ಲಿ ವಿದ್ಯಾರ್ಥಿಗಳ, ಜನಸಾಮಾನ್ಯರಲ್ಲಿರುವ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಬೇಕಾಗಿದೆ ಎಂದು ಅವರು ಹೇಳಿದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಮಾತನಾಡಿ, ಇವತ್ತು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದ ಸ್ಥಿತಿಯಲ್ಲಿದೆ. ಆದರೆ, ಈ ಬಗ್ಗೆ ಕೇವಲ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಮಾತ್ರ ಧ್ವನಿ ಎತ್ತುತ್ತಿವೆ. ಕಾಂಗ್ರೆಸ್, ಜೆಡಿಎಸ್ ತಮ್ಮ ನಿಲುವನ್ನು ಬಹಿರಂಗ ಪಡಿಸುತ್ತಿಲ್ಲವೆಂದು ವಿಷಾದಿಸಿದರು.
ಸಂಘಪರಿವಾರದಂತಹ ಕೋಮುವಾದಿ ಶಕ್ತಿಗಳನ್ನು ಎದುರಿಸಲು ಕೇವಲ ಪ್ರಗತಿಪರ ಸಂಘಟನೆಗಳಿಂದ ಮಾತ್ರ ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್, ಜೆಡಿಎಸ್ ಮೇಲೆ ಒತ್ತಡ ಹಾಕಿ, ಸಂವಿಧಾನ ವಿರೋಧಿಗಳ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಒತ್ತಡ ಹಾಕಬೇಕಿದೆ ಎಂದು ಅವರು ಹೇಳಿದರು.
ಮಾಜಿ ಸಚಿವೆ ಲಲಿತಾ ನಾಯಕ್ ಮಾತನಾಡಿ, ಮಹಿಳಾ ಸಮುದಾಯ ಶಬರಿಮಲೆ ದೇವಸ್ಥಾನಕ್ಕೆ ಹೋಗುವ ಅಗತ್ಯವೇನಿದೆ. ಅದರಿಂದ ಯಾವ ಪ್ರಯೋಜನವಿಲ್ಲ ಎಂದು ತಿಳಿಸಿದರು. ಈ ವೇಳೆ ಮಾನವ ಹಕ್ಕು ಹೋರಾಟಗಾರ ಟಿ.ನರಸಿಂಹಮೂರ್ತಿ, ಪಿಯುಸಿಎಲ್ ಅಧ್ಯಕ್ಷ ಪ್ರೊ.ವೈ.ಜೆ.ರಾಜೇಂದ್ರ, ಪಿಯುಸಿಎಲ್‌ನ ಪಾರಿಜಾತ, ವಕೀಲ ಕ್ಲಿಪ್ಟನ್ ರೊಸ್ಯಾರಿಯೊ ಮತ್ತಿತರರಿದ್ದರು.
ನಮ್ಮ ಸಂವಿಧಾನವನ್ನು ಅಸ್ಪಶ್ಯ ಸಮುದಾಯಕ್ಕೆ ಸೇರಿದ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ್ದಾರೆ ಎಂಬ ಕಾರಣಕ್ಕಾಗಿ ಬಿಜೆಪಿ, ಸಂಘಪರಿವಾರ ಸಂವಿಧಾನವನ್ನು ಬದಲಿಸುತ್ತೇವೆಂದು ಬಹಿರಂಗವಾಗಿ ಸವಾಲು ಹಾಕುತ್ತಿದ್ದಾರೆ. ಹಾಗೂ ಸಂವಿಧಾನದಲ್ಲಿ ಸಮಾನತೆ, ಸಹೋದರತೆ ಹಾಗೂ ಜಾತ್ಯತೀತ ವೌಲ್ಯಗಳು ಮುಖ್ಯಧಾರೆಯಾಗಿದೆ. ಇದು ಕೋಮುವಾದಿ ಸಿದ್ಧಾಂತಕ್ಕೆ ವಿರುದ್ದವಾಗಿದೆ. ಹೀಗಾಗಿ ಹಿಂದೂ ಕೋಮುವಾದಿಗಳ ಸಂವಿಧಾನ ವಿರುದ್ಧ ಅಭಿಪ್ರಾಯ ಮೂಡಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ.
-ಡಾ.ಸಿ.ಎಸ್.ದ್ವಾರಕಾನಾಥ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ







