ಏರ್‌ಸೆಲ್-ಮ್ಯಾಕ್ಸಿಸ್ ತನಿಖೆಯಲ್ಲಿ ಚಿದಂಬರಂ ಸಹಕರಿಸುತ್ತಿಲ್ಲ: ಇಡಿ
ಕಸ್ಟಡಿ ವಿಚಾರಣೆಗೆ ಒಪ್ಪಿಸಲು ಕೋರಿಕೆ

ಹೊಸದಿಲ್ಲಿ,ಅ.31: ಏರ್‌ಸೆಲ್-ಮ್ಯಾಕ್ಸಿಸ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಇಲ್ಲಿಯ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯನ್ನು ಬುಧವಾರ ವಿರೋಧಿಸಿದ ಜಾರಿ ನಿರ್ದೇಶನಾಲಯ(ಇಡಿ)ವು ಅವರನ್ನು ವಿಚಾರಣೆಗಾಗಿ ತನ್ನ ವಶಕ್ಕೆ ನೀಡುವಂತೆ ಕೋರಿಕೊಂಡಿತು.
ಚಿದಂಬರಂ ಅವರು ತನಿಖೆಯಿಂದ ನುಣುಚಿಕೊಳ್ಳುತ್ತಿದ್ದಾರೆ ಮತ್ತು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಇಡಿ ಚಿದಂಬರಂ ಅರ್ಜಿಗೆ ಸಲ್ಲಿಸಿರುವ ತನ್ನ ಉತ್ತರದಲ್ಲಿ ತಿಳಿಸಿದೆ. ವಿಶೇಷ ನ್ಯಾಯಾಧೀಶ ಒ.ಪಿ.ಸೈನಿ ಅವರು ಗುರುವಾರ ಅರ್ಜಿಯ ವಿಚಾರಣೆಯನ್ನು ನಡೆಸಲಿದ್ದಾರೆ.
ನ್ಯಾಯಾಲಯವು ಅ.8ರಂದು ಸಿಬಿಐ ಮತ್ತು ಇಡಿ ದಾಖಲಿಸಿರುವ ಈ ಪ್ರಕರಣದಲ್ಲಿ ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಬಂಧನದ ವಿರುದ್ಧ ತಡೆಯಾಜ್ಞೆಯನ್ನು ನ.1ರವರೆಗೆ ವಿಸ್ತರಿಸಿತ್ತು.
ಅ.25ರಂದು ಪ್ರಕರಣದಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿರುವ ಇಡಿ ಒಟ್ಟು ಒಂಭತ್ತು ಆರೋಪಿಗಳನ್ನು ಹೆಸರಿಸಿದ್ದು,ಚಿದಂಬರಂ ಅವರನ್ನು ನಂ.1 ಆರೋಪಿಯನ್ನಾಗಿ ಕಾಣಿಸಿದೆ.





