ದಲಿತರ ಮೂಲಭೂತ ಹಕ್ಕುಗಳ ಈಡೇರಿಕೆಗೆ ಆಗ್ರಹ: ಅಂಬೇಡ್ಕರ್ ಸೇನೆಯಿಂದ ವಿಧಾನಸೌಧ ಚಲೋ

ಬೆಂಗಳೂರು, ಅ.31: ಪರಿಶಿಷ್ಟರ ಭಡ್ತಿ ಮೀಸಲಾತಿ ಕಾಯ್ದೆ-2017 ಅನ್ನು ಜಾರಿ ಮಾಡಬೇಕು ಸೇರಿದಂತೆ ದಲಿತರ ಮೂಲಭೂತ ಹಕ್ಕುಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಅಂಬೇಡ್ಕರ್ ಸೇನೆ ವತಿಯಿಂದ ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬುಧವಾರ ನಗರದ ಸಿಟಿ ರೈಲು ನಿಲ್ದಾಣದಿಂದ ಬೃಹತ್ ಮೆರವಣಿಗೆ ನಡೆಸಿದ ನೂರಾರು ದಲಿತ ಮುಖಂಡರು ಇಲ್ಲಿನ ಸ್ವಾತಂತ್ರ ಉದ್ಯಾನವನದಲ್ಲಿ ಬೃಹತ್ ಸಮಾವೇಶಗೊಂಡಿತು. ಈ ಸಂದರ್ಭದಲ್ಲಿ ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಮಾವೇಶದಲ್ಲಿ ಮಾತನಾಡಿದ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ರಾಜ್ಯ ಹಾಗೂ ದೇಶದಲ್ಲಿ ದಲಿತರನ್ನು ತಿರಸ್ಕಾರ ಮನೋಭಾವದಿಂದಲೇ ನಮ್ಮನ್ನಾಳುತ್ತಿರುವವರು ನೋಡುತ್ತಿದ್ದಾರೆ. ದಲಿತರು ಇರುವ ಸ್ಥಿತಿಯಲ್ಲಿಯೇ ಇರಬೇಕು ಎಂದು ಬಯಸುವ ಶಕ್ತಿಗಳು ಬಲವಾಗಿ ಬೆಳೆಯುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ದಲಿತರನ್ನು ಕೇವಲ ವೋಟ್ ಬ್ಯಾಂಕ್‌ಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ದಲಿತರ ಮೇಲೆ ನಿರಂತರವಾದ ಶೋಷಣೆ, ದಬ್ಬಾಳಿಕೆ ನಡೆಯುತ್ತಿದ್ದರೂ ಕಣ್ಣುಮುಚ್ಚಿ ನೋಡುತ್ತಾ ಇದ್ದೇವೆ. ಇಂದಿಗೂ ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಸೇನೆಯ ಅಧ್ಯಕ್ಷ ಪಿ.ಮೂರ್ತಿ ಮಾತನಾಡಿ, ದಲಿತರನ್ನು ಮತ್ತೊಮ್ಮೆ ಗುಲಾಮರನ್ನಾಗಿಸುವ ಎಲ್ಲ ಪ್ರಯತ್ನ ನಡೆಯುತ್ತಿದ್ದು, ಅದರ ಭಾಗವಾಗಿ ಸರಕಾರಿ ವ್ಯವಸ್ಥೆಯಲ್ಲಿ ದಲಿತರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ದಮನ ಮಾಡಲಾಗುತ್ತಿದೆ. ಶೈಕ್ಷಣಿಕ ವ್ಯವಸ್ಥೆಯಿಂದಲೂ ದೂರವಿಡುವ ಪ್ರಯತ್ನ ನಡೆಯುತ್ತಿದೆ. ಸರಕಾರಿ ದಲಿತ ನೌಕರರು ಹಾಗೂ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಆದರೂ ಆಳುವ ಸರಕಾರಗಳು ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಪಾದಿಸಿದರು.
ಇದೇ ಸಂದರ್ಭದಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್‌ಗೆ ಬೇಡಿಕೆಗಳ ಪಟ್ಟಿಯ ಮನವಿ ಸಲ್ಲಿಸಿದರು. ಅನಂತರ ಮಾತನಾಡಿದ ಅವರು, ಸಮ್ಮಿಶ್ರ ಸರಕಾರವು ಚಳವಳಿಗಳಿಗೆ ದಾರಿ ಮಾಡಿಕೊಡದೇ ಎಲ್ಲ ಸಮಸ್ಯೆಗಳಿಗೂ ತಕ್ಷಣ ಪರಿಹಾರ ನೀಡಲಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಈ ವಿಚಾರದಲ್ಲಿ ಸಂಪೂರ್ಣ ಸಹಕಾರ ನೀಡುತ್ತಾರೆ. ನಿಮ್ಮ ಬೇಡಿಕೆಗಳನ್ನು ಸರಕಾರದ ಮುಂದೆ ತಂದು, ಸಭೆ ಮಾಡಿ ಬೇಡಿಕೆಗಳ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು.
ಬೇಡಿಕೆಗಳು: ಸಿಂದಗಿ ಪಟ್ಟಣದ 2 ನೆ ವಾರ್ಡಿನಲ್ಲಿ ಕೊಳಚೆ ಪ್ರದೇಶವನ್ನು ನಿರ್ಮೂಲನೆ ಮಾಡಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಇಲ್ಲಿನ ತಾಲೂಕು ಕ್ರೀಡಾಂಗಣಕ್ಕೆ ಅಂಬೇಡ್ಕರ್ ಹೆಸರು ನಾಮಕರಣ ಮಾಡಬೇಕು. ರಾಜ್ಯದ ಪರಿಶಿಷ್ಟರ ಹಾಸ್ಟೆಲ್, ವಸತಿ ನಿಲಯಗಳಲ್ಲಿನ ಕಿರುಕುಳ ತಪ್ಪಿಸಬೇಕು ಹಾಗೂ ಮೆನು ಚಾರ್ಟ್‌ನಂತೆ ಆಹಾರ ನೀಡಬೇಕು. ದಲಿತ ತಮಟೆ ಹಾಗೂ ಎಲ್ಲ ಜಾನಪದ ಕಲಾವಿದರಿಗೆ ವಸತಿ ಸೌಲಭ್ಯ, ಇಎಫ್, ಪಿಎಫ್ ಹಾಗೂ ಆರೋಗ್ಯ ಭಾಗ್ಯವನ್ನು ನೀಡಬೇಕು.
ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಅಂಬೇಡ್ಕರ್ ಪ್ರತಿಮೆ ಹಾಗೂ ಭವನ ನಿರ್ಮಿಸಬೇಕು. ಪೌರ ಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ದಿನಗೂಲಿ ನೌಕರರನ್ನು ಖಾಯಂ ಮಾಡಬೇಕು. ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಮನವಿ ಸಲ್ಲಿಸಿದರು.







