ದೇಶದ ಸ್ವಾಸ್ಥ ಕಾಪಾಡಲು ಆರೋಗ್ಯ ಮುಖ್ಯ: ಅಬ್ದುಲ್ ರಝಾಕ್ ಕೆಮ್ಮಾರ
ಪಿಎಫ್‌ಐನಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನ ಸಮಾರೋಪ

ಮಂಗಳೂರು, ಅ.31: ಧರ್ಮ, ಸಂಸ್ಕೃತಿ, ವೈವಿಧ್ಯತೆ ಉಳಿವಿಗೆ ನಾಡಿನ ಜನರು ಆರೋಗ್ಯವಂತರಾಗಿರಬೇಕು. ದೇಶದ ಸ್ವಾಸ್ಥ ಕಾಪಾಡಲು ಆರೋಗ್ಯ ಮುಖ್ಯವಾಗಿದ್ದು, ದೈಹಿಕ, ಮಾನಸಿಕ ಆರೋಗ್ಯದ ಕಲ್ಪನೆ ಇರಬೇಕು ಎಂದು ಎಂದು ಪಿಎಫ್‌ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ)ನ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರ ಹೇಳಿದರು.
ನಗರದ ಪುರಭವನದಲ್ಲಿ ಪಿಎಫ್‌ಐನಿಂದ ಬುಧವಾರ ಹಮ್ಮಿಕೊಂಡಿದ್ದ ‘ಜನಾರೋಗ್ಯವೇ ರಾಷ್ಟ್ರಶಕ್ತಿ’ ಎಂಬ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮುಹಮ್ಮದ್ ಪೈಗಂಬರರು ವಿವಿಧ ಮಾರ್ಗಗಳ ಮೂಲಕ ತನ್ನ ಅನುಯಾಯಿಗಳಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದ್ದರು. ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಬೇಕು. ಓರ್ವ ಮನುಷ್ಯ ಆರೋಗ್ಯಯುತವಾಗಿದ್ದರೆ ಆತ ಎಲ್ಲರಿಂದಲೂ ಮೆಚ್ಚುಗೆಯನ್ನು ಗಳಿಸುತ್ತಾನೆ. ಆರೋಗ್ಯದ ಬಗ್ಗೆ ಉದಾತ್ತ ಪರಿಕಲ್ಪನೆ ಇರಬೇಕು ಎಂದು ತಿಳಿಸಿದರು.
ನಿತ್ಯ ಬದುಕಿನಲ್ಲಿ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳದಿದ್ದರೆ ಬೆಳವಣಿಗೆ ಅಸಾಧ್ಯ. ಸಂಬಂಧಿಕರು, ಸಮುದಾಯದವರು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಂತಹವರನ್ನು ಆಪ್ತವಾಗಿ ಮಾತನಾಡಿಸಬೇಕು. ಸಾಧ್ಯವಾದಷ್ಟು ಸಹಾಯ, ಸಹಕಾರ ನೀಡಬೇಕು. ನೆರೆಹೊರೆಯವರ ಜೊತೆ ಸದಾ ಅನ್ಯೋನ್ಯತೆಯಿಂದ ಕೂಡಿರಬೇಕು ಎಂದು ಹೇಳಿದರು.
ಮಾನವ ಹಕ್ಕುಗಳ ಹೋರಾಟಗಾರ ದಿನೇಶ್ ಹೆಗ್ಡೆ ಉಳೆಪ್ಪಾಡಿ ಮಾತನಾಡಿ, ನಮ್ಮ ನೆರೆಹೊರೆಯ ಎಲ್ಲ ಧರ್ಮಗಳಿಗೂ ಗೌರವ ನೀಡಬೇಕು. ಸಹಬಾಳ್ವೆ ಯಿಂದ ಬದುಕುವುದೇ ಆರೋಗ್ಯದ ಗುಟ್ಟು. ದೈಹಿಕವಾಗಿ ಇರುವುದಷ್ಟೇ ಆರೋಗ್ಯವಲ್ಲ, ಒಳ ಮನಸಿನಲ್ಲೂ ಆರೋಗ್ಯತೆಯನ್ನು ಕಾಪಾಡಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ಆರೋಗ್ಯ ಕ್ಷೇತ್ರ ಹೆಚ್ಚಿನ ಮಟ್ಟದಲ್ಲಿ ವಿಸ್ತರಿಸಿರಲಿಲ್ಲ. ವಿದ್ವಾಂಸರನ್ನು ಹೊರತುಪಡಿಸಿದರೆ ಮತ್ತಿನ್ನಾರೂ ಚಿಕಿತ್ಸಕರು ಇರಲಿಲ್ಲ. ಆಧುನಿಕ ಜಗತ್ತಿನಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಹಲವು ತಂತ್ರಜ್ಞಾನದ ಸಹಕಾರವಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ನಗರದ ಜ್ಯೋತಿ ಸರ್ಕಲ್‌ನಿಂದ ಪುರಭವನದವರೆಗೆ ಆಯೋಜಿಸಲಾಗಿದ್ದ ಮ್ಯಾರಥಾನ್‌ನಲ್ಲಿ ಸುಮಾರು 500ಕ್ಕೂ ಹೆಚ್ಚು ಸಾರ್ವಜನಿಕರು ಪಾಲ್ಗೊಂಡಿದ್ದರು.
ಆತ್ಮರಕ್ಷಣಾ ಕಲೆ ಪ್ರದರ್ಶನ: ನಗರದ ಪುರಭವನದ ವೇದಿಕೆಯಲ್ಲಿ ಪಿಎಫ್‌ಐನಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸುಮಾರು 30ಕ್ಕೂ ಹೆಚ್ಚು ಕ್ರೀಡಾಪಟುಗಳು ಆತ್ಮರಕ್ಷಣಾ ಕಲೆಯನ್ನು ಪ್ರದರ್ಶಿಸಿದರು. ಇದರಲ್ಲಿ ಕರಾಟೆ, ಸ್ಟೀಲ್ ರಾಡ್, ಚೈನ್ ಗುಂಡುಗಳ ಪರಿಕರಗಳನ್ನು ದೈಹಿಕ ಪ್ರದರ್ಶನ ಹಾಗೂ ದೇಹದಾರ್ಢ್ಯ ಪ್ರದರ್ಶನ, ವೇಟ್ ಲಿಫ್ಟಿಂಗ್ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಪಿಎಫ್‌ಐನ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ, ದ.ಕ. ಜಿಲ್ಲಾ ಅಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಅಬ್ದುಲ್ ರಝಾಕ್ ಎಂ.ಆರ್., ಹನೀಫ್ ಕಾಟಿಪಳ್ಳ, ಪಿಎಫ್‌ಐ ಮಂಗಳೂರು ತಾಲೂಕು ಅಧ್ಯಕ್ಷ ಮೊಯ್ದೀನ್ ಹಳೆಯಂಗಡಿ, ರಫೀವುದ್ದೀನ್ ಕುದ್ರೋಳಿ, ಇಮ್ತಿಯಾಝ್ ಬಂದರ್, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ನಾಸೀರ್, ಮುಸ್ಲಿಂ ಸಂಘಟನೆಗಳ ಒಕ್ಕೂಟದ ಕೆ.ಅಶ್ರಫ್, ಯಾಕೂಬ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸಲಹೆಗಾರ ರಫೀಕ್ ಮಾಸ್ಟರ್, ಇಮ್ರಾನ್ ಕೆ.ಜೆ., ಅಯಾಝ್, ಎ.ಜೆ. ಹಾಸ್ಪಿಟಾಲ್‌ನ ಡಾ.ಶಫೀಕ್ ಮತ್ತಿತರರು ಇದ್ದರು.







