ಸತ್ಯನಾರಾಯಣ ಕೆ., ಶ್ರೀಧರ ಬನವಾಸಿ ಚಡಗ ಸ್ಮಾರಕ ಕಾದಂಬರಿ ಪ್ರಶಸ್ತಿಗೆ ಆಯ್ಕೆ

ಸತ್ಯನಾರಾಯಣ ಕೆ, ಶ್ರೀಧರ ಬನವಾಸಿ
ಉಡುಪಿ, ಅ.31: ಕೋಟೇಶ್ವರ ಎನ್.ಆರ್.ಎ.ಎಂ.ಎಚ್ ಪ್ರಕಾಶನ ದಿಂದ ನೀಡಲಾಗುವ 2018ನೇ ಸಾಲಿನ ಚಡಗ ಸ್ಮಾರಕ ಶ್ರೇಷ್ಠ ಕಾದಂಬರಿ ಪ್ರಶಸ್ತಿಗೆ ಖ್ಯಾತ ಲೇಖಕ, ಸಾಹಿತಿ ಕೆ.ಸತ್ಯನಾರಾಯಣ ಅವರ ‘ಸಾವಿನ ದಶಾವತಾರ’ ಹಾಗೂ ಶ್ರೀಧರ ಬನವಾಸಿ ಅವರ ‘ಬೇರು’ ಕಾದಂಬರಿಗಳು ಆಯ್ಕೆಯಾಗಿವೆ.
ಕರ್ನಾಟಕ ಆಯಕರ ಇಲಾಖೆಯ ಪ್ರಧಾನ ಆಯುಕ್ತರಾಗಿ ನಿವೃತ್ತರಾಗಿರುವ ಕೆ.ಸತ್ಯನಾರಾಯಣ ಅವರು ಅಂಕಣ ಬರಹಗಾರರಾಗಿ ನಾಡಿನಾದ್ಯಂತ ಚಿರಪರಿಚಿತರಾಗಿದ್ದಾರೆ. ಕನ್ನಡದ ಪ್ರಬುದ್ದ ಕತೆಗಾರರಾಗಿ ಗುರುತಿಸಲ್ಪಡುವ ಇವರು, ಸಣ್ಣಕತೆ, ಕಾದಂಬರಿ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಪ್ರವಾಸ ಕಥನ ಇತ್ಯಾದಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 50ಕ್ಕೂ ಅಧಿಕ ಕೃತಿಗಳನ್ನು ರಚಿಸಿ ಕನ್ನಡದ ಪ್ರಮುಖ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ.
ಈ ಬಾರಿಯ ಪ್ರಶಸ್ತಿಯನ್ನು ಕೆ.ಸತ್ಯನಾರಾಯಣ ಅವರೊಂದಿಗೆ ಹಂಚಿ ಕೊಂಡಿರುವ ಯುವ ಲೇಖಕ ಶ್ರೀಧರ ಬನವಾಸಿ ಅವರು ಕಥಾ ಸಂಕಲನ, ಕವನ ಸಂಕಲನ, ಕಾದಂಬರಿ, ಸಂಪಾದಿತ ಕೃತಿ ಸೇರಿದಂತೆ ಒಟ್ಟು ಆರೇಳು ಕೃತಿಗಳನ್ನು ರಚಿಸಿದ್ದಾರೆ. ಬೇರು ಇವರ ಪ್ರಥಮ ಕಾದಂಬರಿ.
ಪ್ರಶಸ್ತಿ ಆಯ್ಕೆಯಲ್ಲಿ ವಿರ್ಮಶಕರಾಗಿರುವ ಬೆಳಗೋಡು ರಮೇಶ ಭಟ್, ತಾರಾ ಭಟ್, ಡಾ.ಯು.ಮಹೇಶ್ವರಿ ಇವರು ತೀರ್ಪುಗಾರರಾಗಿ ಸಹಕರಿಸಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ಪ್ರಶಸ್ತಿಯ ಸಂಚಾಲಕಿ ಶಾರದಾ ಭಟ್ ತಿಳಿಸಿದ್ದಾರೆ.







