ದೇಶಕ್ಕೆ ಪಟೇಲ್, ಇಂದಿರಾ ಕೊಡುಗೆ ಅನನ್ಯ: ಇಬ್ರಾಹೀಂ ಕೋಡಿಜಾಲ್

ಮಂಗಳೂರು, ಅ.31: ದೇಶದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ಉಕ್ಕಿನ ಮಹಿಳೆ ಇಂದಿರಾಗಾಂಧಿ ಈ ದೇಶಕ್ಕೆ ನೀಡಿದ ಕೊಡುಗೆಗಳು ಅನನ್ಯವಾದುದು. ಅವರ ಆದರ್ಶಗಳು ನಮಗೆ ಅನುಕರಣೀಯವಾದುದು ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಹೇಳಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಬುಧವಾರ ಸರ್ದಾರ್ ವಲ್ಲಭಬಾಯಿ ಪಟೇಲ್‌ರ ಜನ್ಮದಿನ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯದಿನದ ಅಂಗವಾಗಿ ಜರುಗಿದ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಚದುರಿ ಹೋಗಿದ್ದ ಪ್ರಾಂತ್ಯಗಳ ಏಕೀಕರಣಕ್ಕೆ ಪಟೇಲರು ಶ್ರಮಿಸಿದ್ದು, ಅವರನ್ನು ದೇಶದ ಏಕತೆಯ ಪ್ರತೀಕ ಎನ್ನಲಾಗುತ್ತಿದೆ. ರಾಜಧನ ರದ್ದತಿ ಬ್ಯಾಂಕ್ ರಾಷ್ಟ್ರೀಕರಣ, ಭೂ ಮಸೂದೆ ಮುಂತಾದ ಕ್ರಾಂತಿಕಾರಿ ಯೋಜನೆಗಳಿಂದ ಇಂದಿರಾ ಗಾಂಧಿಯವರು ದೇಶದ ಜನಮಾನಸದಲ್ಲಿ ನೆಲೆಸು ವಂತಾಯಿತು ಎಂದರು.
ಸರ್ದಾರ್ ಪಟೇಲ್ ಹಾಗೂ ಇಂದಿರಾ ಗಾಂಧಿ ಇಬ್ಬರು ಆದರ್ಶ ಕಾಂಗ್ರೆಸ್ಸಿಗರು ಸರ್ವ ಧರ್ಮಿಯರ ಪ್ರೀತಿ, ವಿಶ್ವಾಸ ಗಳಿಸಿದ್ದರು. ಇಂದಿರಾ ಗಾಂಧಿಯವರ ಹತ್ಯೆ ದೇಶ ಕಂಡ ದೊಡ್ಡ ದುರಂತ. ಕಾಂಗ್ರೆಸ್ ಎಂದಿಗೂ ಪಟೇಲರನ್ನು ನಿರ್ಲಕ್ಷಿಸಿಲ್ಲ. ಅವರಿಬ್ಬರ ಹೆಸರಿನಲ್ಲಿ ಇಂದು ಸೇವಾದಳ ಮತ್ತು ಎನ್‌ಎಸ್‌ಯುಐ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿರುವ ‘ರಕ್ತದಾನ ಶಿಬಿರ’ವು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಮಾಜಿ ಶಾಸಕ ಜೆ.ಆರ್. ಲೋಬೊ ಮಾತನಾಡಿ, ಬಡವರಿಗೆ ಭೂಮಿಯ ಒಡೆತನ ನೀಡಿ ಸೂರನ್ನು ಒದಗಿಸಿ ಕೊಟ್ಟ ಮಹಾನ್ ಸಾಧಕಿ ಇಂದಿರಾ ಗಾಂಧಿಯವರು. ನಮ್ಮ ಜಿಲ್ಲೆಗೆ ಸ್ವಾಭಿಮಾನದ ಬದುಕನ್ನು ಕೊಟ್ಟಂತಹ ಇಂದಿರಾ ಅವರನ್ನು ಜನತೆ ಮರೆತಿರುವುದು ಖೇದಕರ ಸಂಗತಿ. ಪಟೇಲರು ದೇಶದ ಆಡಳಿತದಲ್ಲಿ ಸುವ್ಯವಸ್ಥೆ ತರಲು ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ ಮಾತನಾಡಿ, ರಾಜಕೀಯದಲ್ಲಿ ಮಹಿಳೆಯರು ಮುಂದೆ ಬರಲು ಹಾಗೂ ಉತ್ತಮ ಸ್ಥಾನಮಾನ ಪಡೆಯಲು ಇಂದಿರಾಗಾಂಧಿ ಸ್ಫೂರ್ತಿಯಾಗಿದ್ದಾರೆ ಎಂದರು.
ಸಭೆಯಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಮುಂಚೂಣಿ ಘಟಕದ ಜಿಲ್ಲಾಧ್ಯಕ್ಷ ಮಿಥುನ್ ರೈ, ಎನ್.ಎಸ್. ಕರೀಂ, ಅಬ್ದುಲ್ಲಾ ಬಿನ್ನು, ಜಿಲ್ಲಾ ಉಪಾಧ್ಯಕ್ಷ ಪ್ರಭಾಕರ ಶ್ರೀಯಾನ್, ಜೆ.ಎಂ. ಹಾಜಿ ಜೋಕಟ್ಟೆ, ಕೆಪಿಸಿಸಿ ಕಾರ್ಯದರ್ಶಿ ಮಮತಾ ಗಟ್ಟಿ, ಟಿ.ಎಂ. ಶಾಹೀದ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಆಳ್ವ, ಮೆರಿಲ್ ರೇಗೋ ಹಾಗೂ ವಿಶ್ವಾಸ್‌ಕುಮಾರ್ ದಾಸ್, ಪದ್ಮನಾಭ ನರಿಂಗಾನ, ಯು.ಎಚ್. ಖಾಲಿದ್, ನೀರಜ್ ಪಾಲ್, ಆರಿಫ್ ಬಾವ, ಪ್ರೇಮ್ ಬಲ್ಲಾಳ್‌ಭಾಗ್, ನಝೀರ್ ಬಜಾಲ್, ಎಸ್.ಅಬ್ಬಾಸ್, ರಮಾನಂದ ಪೂಜಾರಿ, ಅಮೃತ್ ವಿ. ಕದ್ರಿ, ಟಿ.ಕೆ. ಸುಧೀರ್, ಪದ್ಮನಾಭ ಅಮೀನ್, ಕುಮಾರಿ ಅಪ್ಪಿ, ಹಿಲ್ಡಾ ಆಳ್ವ, ಎಸ್.ಅಬ್ಬಾಸ್, ನಮಿತಾ ಡಿ.ರಾವ್, ಸಿ.ಎಂ. ಮುಸ್ತಫ ಮೊದಲಾದವರು ಉಪಸ್ಥಿತರಿದ್ದರು.
ಸದಾಶಿವ ಉಳ್ಳಾಲ್ ಸ್ವಾಗತಿಸಿದರು. ಅಶ್ರಫ್ ಸೇವಾದಳ ನಿರೂಪಿಸಿದರು. ಮುಹಮ್ಮದ್ ಹನೀಫ್ ವಂದಿಸಿದರು.







