‘ಸಂಕುಚಿತ ರಾಜಕೀಯ ಲಾಭ’ಕ್ಕಾಗಿ ಪಾಕ್ ನಿಂದ ವಿಶ್ವಸಂಸ್ಥೆ ವೇದಿಕೆಯ ದುರುಪಯೋಗ: ಭಾರತ

ವಿಶ್ವಸಂಸ್ಥೆ, ಅ. 31: ವಿಶ್ವಸಂಸ್ಥೆಯ ಮಹಾಧಿವೇಶನವೊಂದರಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪ ಮಾಡಿರುವುದಕ್ಕಾಗಿ ಭಾರತ ಪಾಕಿಸ್ತಾನವನ್ನು ಟೀಕಿಸಿದೆ. ‘ಸಂಕುಚಿತ ರಾಜಕೀಯ ಲಾಭ’ಕ್ಕಾಗಿ ಯಾವುದೇ ವೇದಿಕೆಯನ್ನು ದುರುಪಯೋಗಪಡಿಸುವುದು ಪಾಕಿಸ್ತಾನದ ಚಾಳಿಯಾಗಿದೆ ಎಂದು ಅದು ಹೇಳಿದೆ.
ದೇಶವೊಂದರ ಪ್ರಾದೇಶಿಕ ಸಮಗ್ರತೆಯನ್ನು ದುರ್ಬಲಗೊಳಿಸಲು ಸ್ವನಿರ್ಧಾರದ ಹಕ್ಕನ್ನು ದುರುಪಯೋಗಪಡಿಸುವಂತಿಲ್ಲ ಎಂದು ವಿಶ್ವಸಂಸ್ಥೆಯಲ್ಲಿರುವ ಭಾರತದ ಖಾಯಂ ನಿಯೋಗದ ಪ್ರಥಮ ಕಾರ್ಯದರ್ಶಿ ಪೌಲೋಮಿ ತ್ರಿಪಾಠಿ ಹೇಳಿದರು.
ಸ್ವನಿರ್ಧಾರದ ಹಕ್ಕಿಗಾಗಿ ಕಾಶ್ಮೀರದ ಜನತೆ ನಡೆಸುತ್ತಿರುವ ಹೋರಾಟವನ್ನು ದಶಕಗಳಿಂದ ಹತ್ತಿಕ್ಕಲಾಗುತ್ತಿದೆ ಎಂಬುದಾಗಿ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಪಾಕಿಸ್ತಾನದ ಪ್ರತಿನಿಧಿ ಮಲೀಹಾ ಲೋಧಿ ಹೇಳಿರುವುದನ್ನು ಸ್ಮರಿಸಬಹುದಾಗಿದೆ.
‘‘ಭದ್ರತಾ ಮಂಡಳಿ ನಿಗದಿಪಡಿಸಿದ ರೀತಿಗೆ ಅನುಸಾರವಾಗಿ ಕಾಶ್ಮೀರದ ಜನರಿಗೆ ತಮ್ಮ ಇಚ್ಛೆಯನ್ನು ತಿಳಿಸಲು ಅವಕಾಶ ನೀಡುವವರೆಗೆ ಕಾಶ್ಮೀರ ವಿವಾದವು ವಿಶ್ವಸಂಸ್ಥೆಯ ಕಾರ್ಯಸೂಚಿಯಲ್ಲಿ ಇರುತ್ತದೆ. ಕಾಶ್ಮೀರದಲ್ಲಿ ವಿಶ್ವಸಂಸ್ಥೆಯ ಉಸ್ತುವಾರಿಯಲ್ಲಿ ಜನಮತಗಣನೆ ನಡೆಯಬೇಕು’’ ಎಂದು ಮಲೀಹಾ ಹೇಳಿದರು.
‘‘ಜಮ್ಮು ಮತ್ತು ಕಾಶ್ಮೀರ ರಾಜ್ಯದ ಬಗ್ಗೆ ನಿಯೋಗವೊಂದು ನೀಡಿರುವ ಅನಗತ್ಯ ಹೇಳಿಕೆಯನ್ನು ನಾವು ತಿರಸ್ಕರಿಸುತ್ತೇವೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ’’ ಎಂದು ಮಂಗಳವಾರ ನಡೆದ ವಿಶ್ವಸಂಸ್ಥೆಯ ಮಹಾಧಿವೇಶನದ ಮೂರನೇ ಸಮಿತಿ ಸಭೆಯಲ್ಲಿ ಮಾತನಾಡಿದ ತ್ರಿಪಾಠಿ ಹೇಳಿದರು.







