ಹಲ್ಲೆ ಪ್ರಕರಣ: ಮೂವರು ಆರೋಪಿಗಳಿಗೆ ಶಿಕ್ಷೆ
ಉಡುಪಿ, ಅ.30: ಕುತ್ಯಾರು ಗ್ರಾಮದ ಭತ್ತಗೇಣಿ ಎಂಬಲ್ಲಿ ಹಲ್ಲೆ ನಡೆಸಿದ ಪ್ರಕರಣದ ಮೂವರು ಆರೋಪಿಗಳಿಗೆ ಜೈಲುಶಿಕ್ಷೆ ವಿಧಿಸಿ ಉಡುಪಿ ಮೂರನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ಅ. 22ರಂದು ಆದೇಶ ನೀಡಿದೆ.
ಮೇರಿ ಪಿಂಟೋ, ಸ್ಟ್ಯಾನಿ ಪಿಂಟೋ ಮತ್ತು ಮೆಗ್ದೆಲಿನ್ ಮಿನೇಜಸ್ ಎಂಬ ವರು ಶಿಕ್ಷೆಗೆ ಗುರಿಯಾದ ಆರೋಪಿಗಳು. ಇವರು 2012ರ ಎ.21ರಂದು ಸಮಾನ ಉದ್ದೇಶದಿಂದ ಎರೆ ಮಣೆಯಿಂದ ಚಾಲ್ಸ್ ಡಿಆಲ್ಮೇಡ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಆಗಿನ ಪೊಲೀಸ್ ಉಪನಿರೀಕ್ಷಕ ಕಮಲಾಕರ್ ಆರ್.ನಾಕ್, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ರಾಮ್ ಪ್ರಶಾಂತ್ ಆರೋಪಿತರ ವಿರುಧ್ದ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ, ಆರೋಪಿಗಳಿಗೆ ಎರಡು ವರ್ಷ ಶಿಕ್ಷೆ ಮತ್ತು ಒಟ್ಟು 5,000 ರೂ. ದಂಡ ವಿಧಿಸಿ, ತೀರ್ಪು ನೀಡಿದರು.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ಕೆ. ವಿಚಾರಣೆ ನಡೆಸಿ, ವಾದ ಮಂಡಿಸಿದ್ದರು.





