ಮೀ ಟೂ ಚಳವಳಿ: ಮಾನನಷ್ಟ ಮೊಕದ್ದಮೆಗೆ ಹೇಳಿಕೆ ನೀಡಿದ ಎಂ.ಜೆ. ಅಕ್ಬರ್

ಹೊಸದಿಲ್ಲಿ, ಅ. 31: ತನ್ನ ವಿರುದ್ಧ ಮಾಡಲಾದ ಲೈಂಗಿಕ ಕಿರುಕುಳದ ಕಪೋಲಕಲ್ಪಿತ, ಅಶ್ಲೀಲ ಹಾಗೂ ಸುಳ್ಳು ಆರೋಪದಿಂದ ‘ತತ್‌ಕ್ಷಣದ ಹಾನಿ’ ಆಗಿದೆ ಎಂದು ಪತ್ರಕರ್ತೆ ಪ್ರಿಯಾರಮಣಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ಮಾಜಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ದಿಲ್ಲಿ ನ್ಯಾಯಾಲಯದಲ್ಲಿ ಬುಧವಾರ ಹೇಳಿದ್ದಾರೆ.
ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಮುಂದೆ ಅಕ್ಬರ್ ಅವರು ಹಾಜರಾದರು ಹಾಗೂ ಅಕ್ಟೋಬರ್ 15ರಂದು ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ದಾಖಲಿಸಲಾದ ಮಾನನಷ್ಟ ದೂರನ್ನು ಬೆಂಬಲಿಸಿ ಹೇಳಿಕೆ ದಾಖಲಿಸಿದರು. 20 ವರ್ಷಗಳ ಹಿಂದೆ ಎಂ.ಜೆ. ಅಕ್ಬರ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪ್ರಿಯಾ ರಮಣಿ ಅವರು ಆರೋಪಿಸಿದ್ದರು. ‘‘ಅಶ್ಲೀಲ ಸ್ವರೂಪದ ಕಪೋಲಕಲ್ಪಿತ, ಸುಳ್ಳು ಆರೋಪದಿಂದ ತತ್‌ಕ್ಷಣದ ಹಾನಿ ಉಂಟಾಗಿದೆ. ಎರಡು ದಶಕಗಳ ಹಿಂದೆ ನಡೆದಿದೆ ಎಂದು ಸುಳ್ಳು ಹಾಗೂ ಕಪೋಲಕಲ್ಪಿತ ಆರೋಪ ಮಾಡುವ ಮೂಲಕ ನನ್ನ ವೈಯುಕ್ತಿಕ ಸಾಮರ್ಥ್ಯದ ಮೇಲೆ ದಾಳಿ ಮಾಡಲಾಗಿದೆ’’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಅಧಿಕಾರ ಬಲವಿಲ್ಲದೆ ನಾನು ನನ್ನ ವೈಯುಕ್ತಿಕ ಸಾಮರ್ಥ್ಯದಿಂದ ನ್ಯಾಯ ಪಡೆಯಲು ಬಯಸುತ್ತೇನೆ. ಹಾಗಾಗಿಯೇ ನಾನು ಕೇಂದ್ರ ಸಹಾಯಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ಸಾರ್ವಜನಿಕರು ಹಾಗೂ ಆಪ್ತರ ಎದುರು ನನ್ನ ಗೌರವಕ್ಕೆ ಮಸಿ ಬಳಿಯಲಾಗಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.





