ಸಂಸದೀಯ ಸಮಿತಿಗೆ ವಂಚಕ ಸುಸ್ತಿಸಾಲಗಳ ಮಾಹಿತಿ ನೀಡಲು ನಿರಾಕರಿಸಿದ ಪ್ರಧಾನಿ ಕಚೇರಿ

ಹೊಸದಿಲ್ಲಿ,ಅ.31: ಪ್ರತಿಷ್ಟಿತರು ನಡೆಸಿರುವ ಸುಸ್ತಿದಾರ ಸಾಲಗಳ ವಂಚನೆಯ ಕುರಿತ ಪಟ್ಟಿಯನ್ನು ಸಂಸತ್‌ನ ಅಂದಾಜು ಸಮಿತಿಗೆ ನೀಡಲು ಪ್ರಧಾನಿ ನರೇಂದ್ರ ಮೋದಿಯವರ ಕಚೇರಿ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ನಿರಾಕರಿಸಿದ್ದಾರೆ. ಈ ಸಮಿತಿಯನ್ನು ಬಿಜೆಪಿ ನಾಯಕ ಮತ್ತು ಸಂಸದ ಮುರಳಿ ಮನೋಹರ್ ಜೋಶಿ ಮುನ್ನಡೆಸುತ್ತಿದ್ದಾರೆ. ಸಾಲಗಾರರ ಮಾಹಿತಿ ನೀಡುವ ಬದಲಿಗೆ ಮೋದಿ ಕಚೇರಿ, ಜೋಶಿಯನ್ನು ಖಾಸಗಿಯಾಗಿ ಭೇಟಿ ಮಾಡಿ ಸಮಿತಿಯ ಕಾರ್ಯದ ಬಗ್ಗೆ ಚರ್ಚಿಸಲು ಹಿರಿಯ ಸಚಿವರನ್ನು ನೇಮಿಸಿದೆ. ಈ ಕ್ರಮವು ಸೌಜನ್ಯದ ಗೆರೆಯನ್ನು ದಾಟುತ್ತದೆ ಎಂದು ಸಾಂವಿಧಾನ ತಜ್ಞರು ತಿಳಿಸಿದ್ದಾರೆ. ಆರ್‌ಬಿಐಯ ಮಾಜಿ ಗವರ್ನರ್ ರಘುರಾಮ್ ರಾಜನ್ ಪ್ರಧಾನಿ ಕಚೇರಿ ಮತ್ತು ಜೇಟ್ಲಿ ಕಚೇರಿಗೆ 2015ರ ಫೆಬ್ರವರಿ 4ರಂದು ಬರೆದ ಪತ್ರದಲ್ಲಿ ಸಂಯೋಜಿತ ತನಿಖೆ ನಡೆಸುವ ಅಗತ್ಯವಿರುವ ವಂಚನೆ ಪ್ರಕರಣಗಳ ಪಟ್ಟಿಯನ್ನು ನೀಡಿದ್ದರು ಎನ್ನುವುದು ಆಂಗ್ಲ ಆನ್‌ಲೈನ್ ಸುದ್ದಿ ಸಂಸ್ಥೆ ಹಾಕಿದ ಮಾಹಿತಿ ಹಕ್ಕಿನ ಮೂಲಕ ತಿಳಿದುಬಂದಿತ್ತು.
ಸರಕಾರದ ನಿರ್ಧಾರದಿಂದ ಆಕ್ರೋಶಗೊಂಡಿರುವ ಜೋಶಿ ಇದೀಗ ರಘುರಾಮ್ ರಾಜನ್ ಅವರಲ್ಲೇ ಈ ಪಟ್ಟಿಯನ್ನು ಕೇಳಲು ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ರಾಜನ್ ಸದ್ಯ ನಿವೃತ್ತರಾಗಿರುವುದರಿಂದ ಈ ಪಟ್ಟಿಯನ್ನು ನೀಡಲು ಅವರಿಗೆ ಯಾವುದೇ ನಿಬಂಧನೆಗಳು ಅಡ್ಡ ಬರುವುದಿಲ್ಲ ಎಂಬ ಕಾರಣಕ್ಕೆ ಜೋಶಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.





