ಏಶ್ಯನ್ ಸ್ನೂಕರ್ ಟೂರ್ ಪ್ರಶಸ್ತಿ ಜಯಿಸಿದ ಪಂಕಜ್ ಅಡ್ವಾಣಿ

ಹೊಸದಿಲ್ಲಿ, ಅ.31: ಹತ್ತೊಂಬತ್ತು ಬಾರಿ ವಿಶ್ವ ಚಾಂಪಿಯನ್ ಕಿರೀಟ ಧರಿಸಿರುವ ಪಂಕಜ್ ಅಡ್ವಾಣಿ ಚೀನಾದ ಜಿನಾನ್‌ನಲ್ಲಿ ಬುಧವಾರ ಏಶ್ಯನ್ ಸ್ನೂಕರ್ ಟೂರ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಈ ಮೂಲಕ ಮುಂಬರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಮೊದಲು ಈ ಪ್ರಶಸ್ತಿಯನ್ನು ಜಯಿಸಿ ಎದುರಾಳಿಗಳಿಗೆ ಪ್ರಬಲ ಸಂದೇಶ ರವಾನಿಸಿದರು. ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅಡ್ವಾಣಿ ಚೀನಾದ ಜು ರೆಟಿ ಅವರನ್ನು 6-1 ಅಂತರದಿಂದ ಮಣಿಸಿದರು. ಏಶ್ಯನ್ ಸ್ನೂಕರ್ ಟೂರ್ ಇವೆಂಟನ್ನು ಜಯಿಸಿದ ಭಾರತದ ಮೊದಲ ಸ್ನೂಕರ್‌ಪಟು ಎನಿಸಿಕೊಂಡರು.
ನೂತನ ಮಾದರಿಯನ್ನು ಎಲ್ಲ ಆಟಗಾರರು ಸ್ವಾಗತಿಸಿದ್ದು, ಎರಡನೇ ಹಂತದ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ಕಂಡುಬಂತು. ಈ ಟೂರ್ನಿಯಲ್ಲಿ ಅಡ್ವಾಣಿ ಪರಿಣಾಮಕಾರಿ ಪ್ರದರ್ಶನ ನೀಡಿದ್ದು ಲೀಗ್ ಹಾಗೂ ನಾಕೌಟ್ ಸೇರಿದಂತೆ ಪ್ರತಿ ಪಂದ್ಯವನ್ನೂ ಏಕಪಕ್ಷೀಯವಾಗಿ ಗೆದ್ದುಕೊಂಡರು. ಲೀಗ್ ಪಂದ್ಯದಲ್ಲಿ ಎರಡು ಫ್ರೇಮ್‌ನ್ನು ಬಿಟ್ಟುಕೊಟ್ಟಿದ್ದ ಅಡ್ವಾಣಿ ಅಂತಿಮ-16 ನಾಕೌಟ್ ಪಂದ್ಯಗಳಲ್ಲಿ ಕೇವಲ ಒಂದು ಫ್ರೇಮ್ ಬಿಟ್ಟುಕೊಟ್ಟರು. ಫೈನಲ್ ಪಂದ್ಯ ಇದಕ್ಕಿಂತ ಭಿನ್ನವಾಗಿರಲಿಲ್ಲ.
33ರ ಹರೆಯದ ಅಡ್ವಾಣಿ ಮ್ಯಾನ್ಮಾರ್ ಆತಿಥ್ಯದಲ್ಲಿ ನವೆಂಬರ್ 12 ರಿಂದ 27ರ ತನಕ ನಡೆಯುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಸಜ್ಜಾ ಗಲಿದ್ದಾರೆ.







