ಭಾರತದ ಪರ 10,000 ರನ್ ಪೂರೆಸಲು ಧೋನಿಗೆ 1 ರನ್ ಅಗತ್ಯ

ತಿರುವನಂತಪುರ, ಅ.31: ಭಾರತದ ಹಿರಿಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಕೂಡ 10,000 ರನ್ ಕ್ಲಬ್ ಮೇಲೆ ಕಣ್ಣಿಟ್ಟಿದ್ದಾರೆ. 37ರ ಹರೆಯದ ಧೋನಿಗೆ 10,000 ರನ್ ಇಲೈಟ್ ಕ್ಲಬ್‌ಗೆ ಸೇರ್ಪಡೆಯಾದ ಭಾರತದ 5ನೇ ಹಾಗೂ ವಿಶ್ವದ 13ನೇ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲು ಇನ್ನು ಕೇವಲ 1 ರನ್ ಅಗತ್ಯವಿದೆ.
ಧೋನಿ 50 ಓವರ್ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 10,173 ರನ್ ಗಳಿಸಿದ್ದಾರೆ. ಇದರಲ್ಲಿ 2007ರಲ್ಲಿ ಆಫ್ರಿಕ ಇಲೆವೆನ್ ವಿರುದ್ಧ ಏಶ್ಯ ಇಲೆವೆನ್ ಪರ 3 ಪಂದ್ಯಗಳ ಸರಣಿಯಲ್ಲಿ ಗಳಿಸಿದ್ದ 174 ರನ್ ಕೂಡ ಸೇರಿದೆ. ಧೋನಿ ಈ ತನಕ ಭಾರತ ತಂಡದ ಪರ 9,999 ರನ್ ಗಳಿಸಿದ್ದಾರೆ. ಧೋನಿ ಮಧ್ಯಮ ಕ್ರಮಾಂಕದಲ್ಲಿ 10,000 ರನ್ ಗಳಿಸಿದ ಏಕೈಕ ದಾಂಡಿಗನಾಗಲಿದ್ದಾರೆ. ಪಾಕಿಸ್ತಾನದ ಇಂಝಮಾಮ್ ವುಲ್ ಹಕ್ ಕೂಡ ಮಧ್ಯಮ ಕ್ರಮಾಂಕದ ದಾಂಡಿಗನಾಗಿದ್ದರು. ಆದರೆ, ಅವರು 62 ಶೇ. ರನ್ ಅಗ್ರ ಕ್ರಮಾಂಕದಲ್ಲಿ ಆಡಿ ಕಲೆ ಹಾಕಿದ್ದರು. ಧೋನಿ 280 ಏಕದಿನ ಇನಿಂಗ್ಸ್‌ಗಳಲ್ಲಿ ಕೇವಲ 47 ಬಾರಿ ಅಗ್ರ ಕ್ರಮಾಂಕದಲ್ಲಿ ಆಡಿದ್ದರು. ಅಗ್ರ ಕ್ರಮಾಂಕದಲ್ಲಿ ಆಡುವ ಬ್ಯಾಟ್ಸ್‌ಮನ್‌ಗೆ ಕ್ರೀಸ್‌ನಲ್ಲಿ ಹೆಚ್ಚು ಸಮಯವಿರಲು ಸಾಧ್ಯವಿರುತ್ತದೆ. ‘ರಾಂಚಿ ಮಿಂಚು’ ಖ್ಯಾತಿಯ ಧೋನಿ 5 ಅಥವಾ 6ನೇ ಕ್ರಮಾಂಕದಲ್ಲಿ ಹೆಚ್ಚಾಗಿ ಬ್ಯಾಟಿಂಗ್ ಮಾಡುತ್ತಿದ್ದರು. 10,000 ರನ್ ಕ್ಲಬ್‌ನಲ್ಲಿರುವ ಇತರ ಆಟಗಾರರಿಗೆ ಹೋಲಿಸಿದರೆ ಧೋನಿ ಹೆಚ್ಚು ಶತಕ ಗಳಿಸಿಲ್ಲ. 2018ರಲ್ಲಿ ಧೋನಿ 12 ಇನಿಂಗ್ಸ್ ಗಳಲ್ಲಿ ಕೇವಲ 252 ರನ್ ಗಳಿಸಿದ್ದಾರೆ.ಧೋನಿ ಗುರುವಾರ ವಿಂಡೀಸ್ ವಿರುದ್ಧ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 10,000 ರನ್ ಕ್ಲಬ್‌ಗೆ ಸೇರಿದರೆ, 10,000 ರನ್ ಕ್ಲಬ್‌ನಲ್ಲಿರುವ ಎರಡನೇ ಸಕ್ರಿಯ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಕೊಹ್ಲಿ ಮೊದಲ ಸಕ್ರಿಯ ಕ್ರಿಕೆಟಿಗನಾಗಿದ್ದಾರೆ.





