ಮ್ಯಾಚ್ ಫಿಕ್ಸಿಂಗ್ ಪ್ರಕರಣ: ಶ್ರೀಲಂಕಾದ ಬೌಲಿಂಗ್ ಕೋಚ್ ಅಮಾನತು
ದುಬೈ, ಅ.31: ಮ್ಯಾಚ್ ಪ್ರಕರಣಕ್ಕೆ ಸಂಬಂಧಿಸಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಶ್ರೀಲಂಕಾದ ಹಾಲಿ ಬೌಲಿಂಗ್ ಕೋಚ್ ನುವಾನ್ ಜೋಯ್ಸಿರನ್ನು ಅಮಾನತುಗೊಳಿಸಿದೆ.
ಶ್ರೀಲಂಕಾ ತಂಡ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನಾಡಲು ಕೇವಲ ಒಂದು ದಿನ ಬಾಕಿ ಇರುವಾಗಲೇ ಐಸಿಸಿ ಕಠಿಣ ಕ್ರಮ ಕೈಗೊಂಡಿದೆ. ಫಲಿತಾಂಶದ ಮೇಲೆ ಪ್ರಭಾವ ಬೀರುವಂತೆ ಆಟಗಾರರಿಗೆ ಪ್ರಚೋದನೆ ಹಾಗೂ ಮ್ಯಾಚ್ ಫಿಕ್ಸಿಂಗ್‌ಗೆ ಸಂಬಂಧಿಸಿ ವಿವಿಧ ವಿಧಿಗಳಡಿ ಐಸಿಸಿ ಪ್ರಕರಣ ದಾಖಲಿಸಿಕೊಂಡಿದೆ. ‘‘ಜೋಯ್ಸಿರನ್ನು ತಕ್ಷಣವೇ ತಾತ್ಕಾಲಿಕವಾಗಿ ಅಮಾನತು ಗೊಳಿಸಲಾಗಿದೆ. ನ.1 ರಿಂದ 14 ದಿನಗಳಲ್ಲಿ ಪ್ರಕರಣದ ಬಗ್ಗೆ ಉತ್ತರಿಸಲು ತಿಳಿಸಲಾಗಿದೆ. ಈ ಹಂತದಲ್ಲಿ ತಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’’ ಎಂದು ಐಸಿಸಿ ತಿಳಿಸಿದೆ.
ಶ್ರೀಲಂಕಾ ಕ್ರಿಕೆಟ್‌ನ ಭ್ರಷ್ಟಾಚಾರ ಚಟುವಟಿಕೆಗೆ ಸಂಬಂಧಿಸಿ ಈಗ ಐಸಿಸಿ ಸಮಗ್ರ ತನಿಖೆ ನಡೆಸುತ್ತಿದೆ. ಇತ್ತೀಚೆಗೆ ತನಿಖೆಗೆ ಸಹಕರಿಸದ ವಿಶ್ವಕಪ್ ವಿಜೇತ ಬ್ಯಾಟಿಂಗ್ ದಂತಕತೆ ಸನತ್ ಜಯಸೂರ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು.
ಮಾಜಿ ಎಡಗೈ ವೇಗದ ಬೌಲರ್ ಜೋಯ್ಸ ಶ್ರೀಲಂಕಾದ ಪರ 30 ಟೆಸ್ಟ್ ಹಾಗೂ 95 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2015ರ ಸೆಪ್ಟಂಬರ್‌ನಲ್ಲಿ ಶ್ರೀಲಂಕಾದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದರು.





