ನೊವಾಕ್ ಜೊಕೊವಿಕ್ ಶುಭಾರಂಭ
ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿ

ಪ್ಯಾರಿಸ್, ಅ.31: ವಿಶ್ವದ ನಂ.2ನೇ ಆಟಗಾರ ನೊವಾಕ್ ಜೊಕೊವಿಕ್ ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಮತ್ತೊಂದೆಡೆ, ರೋಜರ್ ಫೆಡರರ್ ಅವರು 2015ರ ಬಳಿಕ ಮೊದಲ ಬಾರಿ ಟೂರ್ನಿಯಲ್ಲಿ ಭಾಗವಹಿಸುವುದಾಗಿ ದೃಢಪಡಿಸಿದ್ದಾರೆ.
ಇಲ್ಲಿ ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಸರ್ಬಿಯ ಆಟಗಾರ ಜೊಕೊವಿಕ್ ಪೋರ್ಚುಗಲ್‌ನ ಜೊವಾ ಸೌಸಾರನ್ನು 7-5, 6-1 ನೇರ ಸೆಟ್‌ಗಳಿಂದ ಸೋಲಿಸಿದರು. ಪ್ಯಾರಿಸ್ ಮಾಸ್ಟರ್ಸ್ ಒಳಾಂಗಣ ಟೂರ್ನಮೆಂಟ್‌ನಲ್ಲಿ ಜೊಕೊವಿಕ್ ನಾಲ್ಕು ಬಾರಿ ಪ್ರಶಸ್ತಿ ಜಯಿಸಿದ್ದಾರೆ. ಒಂದು ವೇಳೆ ರಫೆಲ್ ನಡಾಲ್‌ಗಿಂತ ಉತ್ತಮ ಪ್ರದರ್ಶನ ನೀಡಿದರೆ ಎಟಿಪಿ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಮತ್ತೆ ಪಡೆಯಬಹುದು.
ಜೊಕೊವಿಕ್ ಅವರು ಸೌಸಾ ವಿರುದ್ಧ ಆಡಿರುವ ಕಳೆದ 5 ಪಂದ್ಯಗಳಲ್ಲಿ ಒಂದೂ ಸೆಟ್ಟನ್ನು ಸೋತಿಲ್ಲ. 14 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಜೊಕೊವಿಕ್ ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ಬೇಗನೆ ಚೇತರಿಸಿಕೊಂಡು ನೇರ ಸೆಟ್‌ಗಳಿಂದ ಜಯ ಸಾಧಿಸಿದರು.
ಜೊಕೊವಿಕ್ ಅಂತಿಮ-16ರ ಸುತ್ತಿನಲ್ಲಿ ಬೊಸ್ನಿಯದ ಡಮಿರ್ ಝುಮ್‌ಹರ್‌ರನ್ನು ಎದುರಿಸಲಿದ್ದಾರೆ. ಝುಮ್‌ಹರ್ ಗ್ರೀಕ್‌ನ ಉದಯೋನ್ಮುಖ ಸ್ಟಾರ್ ಆಟಗಾರ ಸ್ಟಿಫನೊಸ್ ಸಿಟ್‌ಸಿಪಾಸ್‌ರನ್ನು 6-3, 6-3 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಬೈ ಪಡೆದಿರುವ ರೋಜರ್‌ಫೆಡರರ್ ಎರಡನೇ ಸುತ್ತಿನಲ್ಲಿ ಕೆನಡಾದ ಮಿಲೊಸ್ ರಾವೊನಿಕ್‌ರನ್ನು ಎದುರಿಸಲಿದ್ದಾರೆ. ಸ್ವಿಸ್ ಸ್ಟಾರ್ ಫೆಡರರ್ ಗಾಯದ ಸಮಸ್ಯೆಯಿಂದಾಗಿ ಕಳೆದ 2 ವರ್ಷಗಳಿಂದ ಈ ಟೂರ್ನಿಯಲ್ಲಿ ಆಡಿರಲಿಲ್ಲ. ಫೆಡರರ್ ಕಳೆದ 3 ಫ್ರೆಂಚ್ ಓಪನ್ ಟೂರ್ನಿಯಲ್ಲೂ ಭಾಗವಹಿಸಿರಲಿಲ್ಲ.
ವರ್ಷದ ಬಳಿಕ ಗ್ರಾನ್‌ಸ್ಲಾಮ್‌ಯೇತರ ಟೂರ್ನಿಯೊಂದರಲ್ಲಿ ಫೆಡರರ್, ರಫೆಲ್ ನಡಾಲ್ ಹಾಗೂ ನೊವಾಕ್ ಜೊಕೊವಿಕ್ ಆಡುತ್ತಿದ್ದಾರೆ. ಕಳೆದ ವರ್ಷ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಈ ಮೂವರು ದಿಗ್ಗಜರು ಆಡಿದ್ದರು.
ಮುಂದಿನ ಸುತ್ತಿನಲ್ಲಿ ಫೆಡರರ್ ಸವಾಲು ಎದುರಿಸಲಿರುವ ರಾವೊನಿಕ್ ತನ್ನ ಮೊದಲ ಪಂದ್ಯದಲ್ಲಿ ಫ್ರಾನ್ಸ್‌ನ ಜೊ-ವಿಲ್ಫ್ರೆಡ್ ಸೊಂಗರನ್ನು 6-7(4/7), 7-6(7/5), 7-6(7/5) ಅಂತರದಿಂದ ಸೋಲಿಸಿದ್ದಾರೆ.
ಈ ತನಕ ಪ್ಯಾರಿಸ್ ಓಪನ್ ಪ್ರಶಸ್ತಿ ಜಯಿಸಲು ವಿಫಲವಾಗಿರುವ ಸ್ಪೇನ್‌ನ ನಡಾಲ್ ತನ್ನದೇ ದೇಶದ ಫೆರ್ನಾಂಡೊ ವೆರ್ಡಾಸ್ಕೊರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಫೆರ್ನಾಂಡೊ ಫ್ರಾನ್ಸ್‌ನ ಜೆರೆಮಿ ಚಾರ್ಡಿ ಅವರನ್ನು 6-4, 6-4 ನೇರ ಸೆಟ್‌ಗಳಿಂದ ಮಣಿಸಿದ್ದಾರೆ.
ಜರ್ಮನಿಯ ಹಿರಿಯ ಟೆನಿಸಿಗ ಫಿಲಿಪ್ ಕೊಹ್ಲ್ಸ್‌ಕ್ರೈಬೆರ್‌ರನ್ನು 6-3, 6-4 ಅಂತರದಿಂದ ಮಣಿಸಿರುವ 5ನೇ ಶ್ರೇಯಾಂಕದ ಮರಿನ್ ಸಿಲಿಕ್ ಮೂರನೇ ಸುತ್ತಿನ ತೇರ್ಗಡೆಯಾದರು.







