2 ಐಐಟಿ ಕ್ಯಾಂಪಸ್, 6 ಮಂಗಳಯಾನ ಮಿಷನ್… ಇತ್ಯಾದಿ
ಏಕತೆಯ ಪ್ರತಿಮೆಯ 2900 ಕೋಟಿ ರೂ. ವೆಚ್ಚದಲ್ಲಿ ಏನೆಲ್ಲಾ ಮಾಡಬಹುದಿತ್ತು…: ಇಲ್ಲಿದೆ ವಿವರ

ಏಕತೆಯ ಪುತ್ಥಳಿ 2,989 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಇಷ್ಟೊಂದು ದೊಡ್ಡ ಮೊತ್ತ ಎರಡು ಐಐಟಿ ಕ್ಯಾಂಪಸ್ ನಿರ್ಮಿಸಲು, ಐದು ಐಐಎಂ ಕ್ಯಾಂಪಸ್ ನಿರ್ಮಿಸಲು ಮತ್ತು ಇಸ್ರೋದ ಆರು ಮಂಗಳಯಾನಕ್ಕೆ ಸಾಕಾಗುತ್ತಿತ್ತು!.
ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆಯಡಿ ಗುಜರಾತ್ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ವೆಚ್ಚದ ಎರಡು ಪಟ್ಟು ಮೊತ್ತ ಈ ಪುತ್ಥಳಿ ನಿರ್ಮಾಣಕ್ಕೆ ವೆಚ್ಚವಾಗಿದೆ. ಈ ನಿರ್ಮಾಣ ವೆಚ್ಚದಲ್ಲಿ 40,192 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಜತೆಗೆ 162 ಸಣ್ಣ ನೀರಾವರಿ ಯೋಜನೆಗಳ ದುರಸ್ತಿ, ಆಧುನೀಕರಣ ಮತ್ತು ಪುನರುಜ್ಜೀವನ ಮತ್ತು 425 ಚೆಕ್ ಡ್ಯಾಂಗಳನ್ನು ನಿರ್ಮಿಸಬಹುದಿತ್ತು.
ಸ್ವಾತಂತ್ರ್ಯೋತ್ತರ ಭಾರತದ ಏಕೀಕರಣದ ಸಂಕೇತವಾಗಿ ಏಕತೆಯ ಪುತ್ಥಳಿಯನ್ನು ಪ್ರಧಾನಿ ನರೇಂದ್ರ ಮೋದಿ, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 143ನೇ ಹುಟ್ಟುಹಬ್ಬದ ಸಂದರ್ಭದಲ್ಲಿ 2018ರ ಅಕ್ಟೋಬರ್ 31ರಂದು ಅನಾವರಣಗೊಳಿಸಿದ್ದರು. ಈ ಪ್ರತಿಮೆ ವಿಶ್ವದ ಅತಿ ಎತ್ತರದ ಪುತ್ಥಳಿ ಎನಿಸಿಕೊಂಡಿದ್ದು, 182 ಮೀಟರ್ (597 ಅಡಿ) ಎತ್ತರವಿದೆ. ಅಂದರೆ ಆರಡಿ ಎತ್ತರದ ವ್ಯಕ್ತಿಯ 100 ಪಟ್ಟು ಎತ್ತರ!
ಭಾರತದ ಮೊಟ್ಟಮೊದಲ ಉಪಪ್ರಧಾನಿ ಹಾಗೂ ಗೃಹಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಭಾರತದ ಉಕ್ಕಿನ ಮನುಷ್ಯ ಎಂದೇ ಜನಪ್ರಿಯ. ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ಸಣ್ಣ ಪುಟ್ಟ ರಾಜಾಡಳಿತದ ಪ್ರಾಂತ್ಯಗಳನ್ನು ಒಗ್ಗೂಡಿಸುವಲ್ಲಿ ಇವರು ಅಪಾರ ಶ್ರಮ ವಹಿಸಿದ್ದರು.
ಸ್ಥಳೀಯರು, ರೈತರಲ್ಲಿ ಅಸಮಾಧಾನ
ಈ ಪ್ರತಿಮೆ ಅನಾವರಣದ ವಿರುದ್ಧ ಸಾವಿರಾರು ಮಂದಿ ರೈತರು ಮತ್ತು ಬುಡಕಟ್ಟು ಮಂದಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಈ ಯೋಜನೆಗೆ ಇಷ್ಟೊಂದು ದೊಡ್ಡ ಮೊತ್ತವನ್ನು ವೆಚ್ಚ ಮಾಡಿರುವ ಬಗ್ಗೆ ಅವರಲ್ಲಿ ಅಸಮಾಧಾನ ಮಡುಗಟ್ಟಿದೆ. ಇನ್ನೊಂದೆಡೆ ಈ ಪುತ್ಥಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪುನರ್ವಸತಿ ಕಾರ್ಯ ಸಮರ್ಪಕವಾಗಿ ಆಗಿಲ್ಲ; ಜತೆಗೆ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಸಮಸ್ಯೆಯೂ ವ್ಯಾಪಕವಾಗಿದೆ.
ಈ ಪುತ್ಥಳಿಯ ನಿರ್ಮಾಣದಿಂದ ಗುಜರಾತ್‍ನ ನರ್ಮದಾ ಜಿಲ್ಲೆಯ ಸುಮಾರು 72 ಗ್ರಾಮಗಳಲ್ಲಿ ವಾಸವಿರುವ 75 ಸಾವಿರ ಮಂದಿ ಬುಡಕಟ್ಟು ಜನರಿಗೆ ತೊಂದರೆಯಾಗಿದೆ. ಈ ಪೈಕಿ 32 ಗ್ರಾಮಗಳಿಗೆ ತೀವ್ರ ಹಾನಿಯಾಗಿದೆ.
19 ಗ್ರಾಮಗಳಲ್ಲಿ ಪುನರ್ವಸತಿ ಕಾರ್ಯ ಪೂರ್ಣವಾಗಿಲ್ಲ. 13 ಗ್ರಾಮಗಳ ನಿವಾಸಿಗಳಿಗೆ ಪರಿಹಾರ ನೀಡಿದ್ದರೂ, ಅವರಿಗೆ ಉದ್ಯೋಗ ಹಾಗೂ ಜಮೀನು ಮಂಜೂರು ಮಾಡುವ ಭರವಸೆ ಈಡೇರಿಲ್ಲ. ಪುತ್ಥಳಿ ಅನಾವರಣ ಸಂದರ್ಭದಲ್ಲಿ ನರ್ಮದಾ ನದಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ರೈತರು ಬೆದರಿಕೆ ಹಾಕಿದ್ದರು ಎಂದು 2018ರ ಅಕ್ಟೋಬರ್ ಸಂಚಿಕೆಯಲ್ಲಿ ‘ಇಂಡಿಯನ್ ಎಕ್ಸ್‍ಪ್ರೆಸ್’ ವರದಿ ಮಾಡಿತ್ತು.
ಚೋಟಾ ಉದೇಪುರ, ಪಂಚಮಹಲ್ಸ್, ವಡೋದರ ಮತ್ತು ನರ್ಮದಾ ಜಿಲ್ಲೆಗಳ 1500ಕ್ಕೂ ಹೆಚ್ಚು ರೈತರಲ್ಲೂ ಪುತ್ಥಳಿ ಅನಾವರಣದ ಬಗ್ಗೆ ವ್ಯಾಪಕ ಅಸಮಾಧಾನವಿದೆ. ಏಕೆಂದರೆ ಈ ರೈತರು 1.62 ಲಕ್ಷ ಕಬ್ಬನ್ನು ಸಂಖೇಡದಲ್ಲಿರುವ ಸರ್ದಾರ್ ಸಕ್ಕರೆ ಕಾರ್ಖಾನೆಗೆ ಮಾರಾಟ ಮಾಡಿದ್ದರು. ಈ ಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯರು ಹಣಕಾಸು ಅವ್ಯವಹಾರ ಎಸಗಿದ್ದರಿಂದ ಕಾರ್ಖಾನೆ ಇದೀಗ ಮುಚ್ಚಿದ್ದು, ರೈತರು ಮಾರಾಟ ಮಾಡಿದ ಕಬ್ಬಿಗೆ ಕಾರ್ಖಾನೆ 12 ಕೋಟಿ ರೂಪಾಯಿ ಪಾವತಿಸಬೇಕಿದೆ.
"ನರ್ಮದಾ ಅಣೆಕಟ್ಟಿನಲ್ಲಿ ನೀರಿನ ಲಭ್ಯತೆ ಕಡಿಮೆ ಇರುವುದರಿಂದ ಗುಜರಾತ್ ರಾಜ್ಯ ನೀರಿನ ಸಮಸ್ಯೆಯಿಂದ ಕಂಗೆಟ್ಟಿರುವ ಪರಿಸ್ಥಿತಿಯಲ್ಲಿ, ಈ ಪುತ್ಥಳಿ ಯೋಜನೆಯನ್ನು ಒಂದು ವರ್ಷ ಮುಂದೂಡಬಹುದಿತ್ತು" ಎಂದು ಗುಜರಾತ್‍ನ ರಾಜಕೀಯ ವಿಶ್ಲೇಷಕ ಘನಶ್ಯಾಮ್ ಶಾ ಅಭಿಪ್ರಾಯಪಟ್ಟಿದ್ದಾಗಿ ಮಿಂಟ್ 2018ರ ಅಕ್ಟೋಬರ್ 30ರಂದು ವರದಿ ಮಾಡಿತ್ತು.
ಪುತ್ಥಳಿ ನಿರ್ಮಾಣವಾದ ಗ್ರಾಮದ ರೈತ ವಿಜೇಂದ್ರ ತಾಡ್ವಿ ತಮ್ಮ ಮೂರು ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಹೆಣಗಾಡುತ್ತಿರುವ ದಯನೀಯ ಸ್ಥಿತಿಯನ್ನು 2018ರ ಅಕ್ಟೋಬರ್ 28ರಂದು ಬಿಬಿಸಿ ವರದಿ ಮಾಡಿತ್ತು. "ಇಂಥ ದೈತ್ಯ ಪುತ್ಥಳಿಗೆ ಹಣ ವೆಚ್ಚಮಾಡುವ ಬದಲು ಸರ್ಕಾರ ಈ ಹಣವನ್ನು ಜಿಲ್ಲೆಯ ರೈತರ ಕಲ್ಯಾಣಕ್ಕೆ ಖರ್ಚು ಮಾಡಬಹುದಿತ್ತು" ಎಂದು ತಾಡ್ವಿ ಅಭಿಪ್ರಾಯಪಟ್ಟಿದ್ದರು.
ಪುತ್ಥಳಿಗೆ ಮಾಡಿದ ದುಬಾರಿ ವೆಚ್ಚದ ಅಗಾಧತೆ ಎಷ್ಟು ಗೊತ್ತೇ?
* ಕೇಂದ್ರ ಸರ್ಕಾರ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಗುಜರಾತ್‍ಗೆ 2017-18ರಲ್ಲಿ ನೀಡಿದ ಅನುದಾನ (365 ಕೋಟಿ ರೂಪಾಯಿ)ಕ್ಕಿಂತ ಎಂಟು ಪಟ್ಟು ಅಧಿಕ ಮತ್ತು ರಾಜ್ಯ ಸರ್ಕಾರ ಈ ಯೋಜನೆಯಡಿ 56 ಹೊಸ ಯೋಜನೆಗಳಿಗೆ ಮತ್ತು 32 ಮುಂದುವರಿದ ಯೋಜನೆಗಳಿಗೆ ಅನುಮೋದನೆ ನೀಡಿದ ಮೊತ್ತ (602 ಕೋಟಿ)ದ ಐದು ಪಟ್ಟು.
* ಪುತ್ಥಳಿಗೆ ಮಾಡಿರುವ ವೆಚ್ಚ ಎರಡು ಪ್ರಮುಖ ಪೈಪ್‍ಲೈನ್ ನೀರು ಸರಬರಾಜು ಯೋಜನೆಗಳ ಅಂದಾಜು ವೆಚ್ಚ (1090 ಕೋಟಿ)ದ ದುಪ್ಪಟ್ಟು. ಮೊದಲ ಯೋಜನೆಯಡಿ ಖಡಾನಾ ಸರೋವರದಿಂದ ದಹೋದ್ ಹಾಗೂ ಮಹಿಸಾಗರ ಜಿಲ್ಲೆಗಳ 10 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿತ್ತು. ಎರಡನೇ ಯೋಜನೆಯಡಿ ದಿನೋದ್- ಬರಿದ್ರಾ ಏತ ನೀರಾವರಿ ಯೋಜನೆಯಡಿ ಸೂರತ್ ಜಿಲ್ಲೆಯ 1800 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿತ್ತು.
* ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆಯಡಿ ಗುಜರಾತ್ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿದ ಪ್ರಸ್ತಾವನೆ (1114 ಕೋಟಿ ರೂಪಾಯಿ)ಯ ಅಂದಾಜು ವೆಚ್ಚದ ಎರಡು ಪಟ್ಟಿಗಿಂತಲೂ ಅಧಿಕ ಮೊತ್ತವನ್ನು ಪುತ್ಥಳಿ ನಿರ್ಮಾಣಕ್ಕೆ ವ್ಯಯಿಸಲಾಗಿದೆ. ಈ ಯೋಜನೆಯಡಿ 40,192 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಜತೆಗೆ 162 ಸಣ್ಣ ನೀರಾವರಿ ಯೋಜನೆಗಳ ದುರಸ್ತಿ, ಆಧುನೀಕರಣ ಮತ್ತು ಪುನರುಜ್ಜೀವನ ಮಾಡಲು ಹಾಗೂ 425 ಸಣ್ಣ ತಡೆ ಅಣೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು.
ಈ ವೆಚ್ಚದಲ್ಲಿ ಏನು ನಿರ್ಮಿಸಬಹುದಿತ್ತು ಗೊತ್ತೇ?
1. ಎರಡು ಹೊಸ ಐಐಟಿ ಕ್ಯಾಂಪಸ್‍ಗಳನ್ನು. (ಒಂದು ಐಐಟಿ ಕ್ಯಾಂಪಸ್‍ನ ವೆಚ್ಚ 1167 ಕೋಟಿ ರೂಪಾಯಿ ಎಂದು ಪರಿಗಣಿಸಿ).
2.ಎರಡು ಎಐಐಎಂಎಸ್ ಕ್ಯಾಂಪಸ್‍ಗಳನ್ನು. (ಒಂದು ಎಐಐಎಂಎಸ್ ಕ್ಯಾಂಪಸ್ ನಿರ್ಮಾಣದ ಅಂದಾಜು ವೆಚ್ಚ 1103 ಕೋಟಿ ಎಂಬ ಅಂದಾಜು).
3.ಐದು ಕಾಯಂ ಐಐಎಂ ಕ್ಯಾಂಪಸ್ (ಒಂದು ಐಐಎಂ ಕ್ಯಾಂಪಸ್ ನಿರ್ಮಾಣದ ಅಂದಾಜು ವೆಚ್ಚ 539 ಕೋಟಿ ಎಂಬ ಅಂದಾಜು).
4. ತಲಾ 75 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಐದು ಹೊಸ ಸೌರ ವಿದ್ಯುತ್ ಘಟಕಗಳು. (ಒಂದು ಘಟಕ ನಿರ್ಮಾಣದ ಅಂದಾಜು ವೆಚ್ಚ 528 ಕೋಟಿ ಎಂಬ ಅಂದಾಜು).
5. ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಆರು ಮಂಗಳಯಾನ ಮಿಷನ್ (ಒಂದು ಮಿಷನ್‍ನ ವೆಚ್ಚ 450 ಕೋಟಿ) ಮತ್ತು ಮೂರು ಚಂದ್ರಯಾನ-2 ಮಿಷನ್. (ಒಂದು ಮಿಷನ್ ವೆಚ್ಚ ಅಂದಾಜು 800 ಕೋಟಿ ರೂಪಾಯಿ).
ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ವಿಶ್ವದ ಅತಿ ಎತ್ತರದ ಪ್ರತಿಮೆ
ಇದೀಗ ನಿರ್ಮಾಣವಾಗಿರುವ ಏಕತೆಯ ಪುತ್ಥಳಿ, ಚೀನಾದಲ್ಲಿರುವ ಸ್ಪ್ರಿಂಗ್ ಟೆಂಪಲ್‍ನ ಬುದ್ಧನ ಪ್ರತಿಮೆಗಿಂತ 29 ಮೀಟರ್‍ನಷ್ಟು ಹೆಚ್ಚು ಎತ್ತರ ಹೊಂದಿದೆ. 153 ಮೀಟರ್ ಎತ್ತರದ ಬುದ್ಧಪ್ರತಿಮೆ ಇದುವರೆಗೆ ವಿಶ್ವದ ಅತಿ ಎತ್ತರದ ಪುತ್ಥಳಿ ಎಂಬ ಹೆಗ್ಗಳಿಕೆ ಹೊಂದಿತ್ತು. ಜತೆಗೆ ಹೊಸ ಪುತ್ಥಳಿಯ ಎತ್ತರ ಅಮೆರಿಕದಲ್ಲಿರುವ ಸ್ಟ್ಯಾಚ್ಯೂ ಆಫ್ ಲಿಬರ್ಟಿ (93 ಮೀಟರ್) ಎತ್ತರದ ದುಪ್ಪಟ್ಟು.
ಆಂಧ್ರಪ್ರದೇಶದಲ್ಲಿರುವ ವಿಜಯವಾಡದ ವೀರ ಅಭಯ ಆಂಜನೇಯ ಹನುಮಾನ್ ಪ್ರತಿಮೆ 135 ಅಡಿ ಅಥವಾ 41 ಮೀಟರ್ ಎತ್ತರವಿದ್ದು, ಇದು ಭಾರತದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಹೊಂದಿತ್ತು.
"ಈ ಏಕತೆ ಪುತ್ಥಳಿ, ಪ್ರತಿಯೊಬ್ಬರಿಗೂ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುವ ಜತೆಗೆ, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಏಕತೆ, ರಾಷ್ಟ್ರಪ್ರೇಮ, ಎಲ್ಲರನ್ನು ಒಳಗೊಂಡ ಪ್ರಗತಿ ಹಾಗೂ ಉತ್ತಮ ಆಡಳಿತದ ತತ್ವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವಂತೆ ಸ್ಫೂರ್ತಿ ತುಂಬಲಿದೆ" ಎಂದು ಯೋಜನೆಯ ಪೋರ್ಟೆಲ್‍ನಲ್ಲಿ ಇದರ ಹಿಂದಿನ ಉದ್ದೇಶವನ್ನು ವಿವರಿಸಲಾಗಿದೆ.
ಕೃಪೆ: indiaspend.com







