ಕನ್ನಡ ಅಳಿದು ಹೋಗುವ ಭಾಷೆಯಲ್ಲ: ಕೆ.ಎಚ್. ಕೃಷ್ಣಮೂರ್ತಿ
ಪುತ್ತೂರು ಕನ್ನಡ ರಾಜ್ಯೋತ್ಸವ

ಪುತ್ತೂರು, ನ.1: ಹಲವಾರು ನಾಯಕರ ತ್ಯಾಗ ಬಲಿದಾನಗಳಿಂದಾಗಿ ಕನ್ನಡದ ಏಕೀಕರಣವಾಗಿದೆ. ಎಲ್ಲಾ ಧರ್ಮೀಯರನ್ನು ಪ್ರೀತಿಸಿ ಸೌಹಾರ್ದಕ್ಕೆ ನಾಂದಿಯಾಗಿರುವ ಕನ್ನಡ ಅಳಿದು ಹೋಗುವ ಭಾಷೆಯಲ್ಲ, ಉಳಿಯುವ ಭಾಷೆಯಾಗಿದೆ ಎಂದು ಪುತ್ತೂರು ಉಪವಿಭಾಗಾಧಿಕಾರಿ ಕೆ.ಎಚ್.ಕೃಷ್ಣಮೂರ್ತಿ ಹೇಳಿದರು.
ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಗುರುವಾರ ನಡೆದ 63ನೇ ಕನ್ನಡ ರಾಜ್ಯೊತ್ಸವ ಕಾರ್ಯಕ್ರಮದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಕನ್ನಡ ಧ್ವಜಾರೋಹಣ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ದೇಶವು ವಿವೇಕಾನಂದ, ಗಾಂಧೀಜಿ, ಅಬ್ದುಲ್ ಕಲಾಂರಂತಹ ಯುವ ಸಮುದಾಯವನ್ನು ಬಯಸುತ್ತಿದೆ. ಆತ್ಮಾಭಿಮಾನ ಹಾಗೂ ಸ್ವಾಭಿಮಾನ ಬೆಳೆಸಲು ಕನ್ನಡ ಭಾಷೆಯಿಂದ ಮಾತ್ರ ಸಾಧ್ಯ. ಕನ್ನಡಕ್ಕಾಗಿ ಹೋರಾಡಿ ಇತಿಹಾಸ ಸೃಷ್ಟಿಸಿದವರು ನಮಗೆ ಆದರ್ಶವಾಗಬೇಕು. ಕನ್ನಡವನ್ನು ಉಳಿಸಲು ಕೇವಲ ನವೆಂಬರ್ ಒಂದರಂದು ಕಾರ್ಯಕ್ರಮ ನಡೆಸಿದರೆ ಸಾಲದು. ಕನ್ನಡ ನಮ್ಮ ಮೈಮನಗಳ ತುಂಬಿ ಕವಿ ನಿಸಾರ್ ಅಹಮದ್ ಅವರು ಹೇಳಿದಂತೆ ನಿತ್ಯೋತ್ಸವ ಆಗಬೇಕು ಎಂದರು.
ಕನ್ನಡ ಜಾಗೃತಿ ಉಪನ್ಯಾಸ ನೀಡಿದ ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ನರೇಂದ್ರ ರೈ ದೇರ್ಲ, ತನ್ನ ಹೆಸರಿನೊಂದಿಗೆ ‘ಕನ್ನಡ’ವನ್ನು ಸೇರಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನ್ನಡವನ್ನು ಅತ್ಯಂತ ಕಡಿಮೆ ಜನರು ಮಾತನಾಡುತ್ತಿದ್ದಾರೆ. ಇಲ್ಲಿ ಅನೇಕ ಭಾಷೆಗಳಿದ್ದರೂ ಅವುಗಳ ನಡುವೆ ಕನ್ನಡ ಜೀವ ಕಳೆದುಕೊಂಡಿಲ್ಲ. ಯಾವುದೇ ಭಾಷೆ ಲಿಪಿಯಿಂದ ಬದುಕಲಾರದು. ಮಾತುಕತೆ, ಸಹವಾಸ, ಸಂಬಂಧಗಳಿಂದ ಮಾತ್ರ ಬೆಳೆಯಲು ಸಾಧ್ಯ. ಆಧುನೀಕರಣ ಮತ್ತು ನವನಾಗರಿಕತೆ ಆಡುಭಾಷೆಯನ್ನು ನಿಧಾನವಾಗಿ ಸಾಯಿಸುತ್ತಿದೆ. ಇದನ್ನು ಎಚ್ಚರದಿಂದ ಗಮನಿಸಬೇಕಾಗಿದೆ. ಕನ್ನಡವನ್ನು ಮಾತನಾಡುವ ಹಾಗೂ ಪ್ರೀತಿಸುವ ಮೂಲಕ ಭಾಷೆಯನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮಕ್ಕೆ ಮೊದಲು ದರ್ಬೆ ವೃತ್ತದಿಂದ ಪುತ್ತೂರು ನಗರದ ಮುಖ್ಯ ರಸ್ತೆಯಲ್ಲಿ ಸಾಗಿ ಕಿಲ್ಲೆ ಮೈದಾನದ ತನಕ ಕನ್ನಡ ಭುವನೇಶ್ವರಿಯ ಭವ್ಯ ಮೆರವಣಿಗೆ ನಡೆಯಿತು.
ಇನ್ಸ್‌ಪೆಕ್ಟರ್ ಅಜಯ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಗೃಹ ರಕ್ಷಕ ದಳ, ಅಗ್ನಿ ಶಾಮಕ ದಳ, ಕಬ್ಸ್ ಮತ್ತು ಬುಲ್‌ಬುಲ್, ರೋವರ್ಸ್ ಮತ್ತು ರೇಂಜರ್ಸ್ ತಂಡದಿಂದ ಗೌರವ ವಂದನೆ ನೀಡಲಾಯಿತು.
ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ತಹಶೀಲ್ದಾರ್ ಅನಂತಶಂಕರ ಉಪಸ್ಥಿತರಿದ್ದರು. ಉಪತಹಶೀಲ್ದಾರ್ ಶ್ರೀಧರ್ ಕೋಡಿಜಾಲ್ ಸ್ವಾಗತಿಸಿದರು.
ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್. ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ವಿವಿಧ ಶಾಲಾ ಮಕ್ಕಳಿಂದ ಕನ್ನಡ ನಾಡುನುಡಿ ಪ್ರೇರೇಪಣೆಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.







