“ಅದು ಹಕ್ಕಿಯ ಹಿಕ್ಕೆಯೇ?”: ಮೋದಿ ಬಗ್ಗೆ ಟ್ವೀಟ್ ಮಾಡಿದ ರಮ್ಯಾ ವಿವಾದದ ಸುಳಿಯಲ್ಲಿ

ಫೋಟೊ ಕೃಪೆ: aninews.in
ಹೊಸದಿಲ್ಲಿ, ನ.1: ಕಾಂಗ್ರೆಸ್ ಐಟಿ ಘಟಕದ ಮುಖ್ಯಸ್ಥೆ ಹಾಗೂ ನಟಿ ದಿವ್ಯ ಸ್ಪಂದನಾ (ರಮ್ಯಾ) ಮತ್ತೆ ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಟ್ವೀಟ್ ಮಾಡಿ ವಿವಾದಕ್ಕೀಡಾಗಿದ್ದಾರೆ. ಬುಧವಾರ ಸರ್ದಾರ್ ಪಟೇಲ್ ಪ್ರತಿಮೆ ಉದ್ಘಾಟನೆಯ ವೇಳೆ ಪ್ರತಿಮೆಯ ಕಾಲಿನ ಬಳಿ ಮೋದಿ ನಿಂತಿರುವ ಚಿತ್ರ ಪೋಸ್ಟ್ ಮಾಡಿದ ರಮ್ಯಾ ನಂತರ ಪ್ರತಿಕ್ರಿಯಿಸಿ ``ಈಸ್ ದ್ಯಾಟ್ ಬರ್ಡ್ ಡ್ರಾಪಿಂಗ್?'' (ಅದು ಹಕ್ಕಿಯ ಹಿಕ್ಕೆಯೇ?) ಎಂದು ಪ್ರಶ್ನಿಸಿದ್ದರು.
ಅವರ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ. ಬಿಜೆಪಿಗರು ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷದ ಕೆಲವರೂ ಈ ಟ್ವೀಟ್ ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಮ್ಯಾ ಅವರ ಟ್ವೀಟ್ ಗೆ ಆಕ್ರೋಶದಿಂದ ಪ್ರತಿಕ್ರಿಯಿಸಿದ ಬಿಜೆಪಿ “ಕಾಂಗ್ರೆಸ್ ಪಕ್ಷದ ಮೌಲ್ಯಗಳು ಕುಸಿಯುತ್ತಿವೆ (ಡ್ರಾಪಿಂಗ್)'' ಎಂದು ಟ್ವೀಟ್ ಮಾಡಿದೆ. ಆದರೆ ರಮ್ಯಾ ಈ ಬಗ್ಗೆ ಟ್ವೀಟ್ ಮಾಡಿ, “ನೀವು ಹೇಳಿದ್ದೆಲ್ಲಾ ಮುಗಿಸಿದ ಮೇಲೆ ಉಸಿರೆಳೆದುಕೊಂಡು ನಿಮ್ಮನ್ನು ನೀವೇ ಕನ್ನಡಿಯಲ್ಲಿ ನೋಡಿಕೊಳ್ಳಿ. ನನ್ನ ಅಭಿಪ್ರಾಯಗಳು ನನ್ನವು. ನನ್ನ ಟ್ವೀಟ್ನ ಅರ್ಥವೇನೆಂದು ನಾನು ಅಂದುಕೊಂಡಿದ್ದೇನೆ ಅಥವಾ ಅಂದುಕೊಂಡಿಲ್ಲ ಎಂಬ ಬಗ್ಗೆ ಸ್ಪಷ್ಟೀಕರಣ ನೀಡುವುದಿಲ್ಲ. ನಿಮಗೆ ಅದರ ಅಗತ್ಯವೂ ಇಲ್ಲ'' ಎಂದು ಟ್ವೀಟ್ ಮಾಡಿದ್ದಾರೆ.
ಇದು ಇತ್ತೀಚಿಗಿನ ದಿನಗಳಲ್ಲಿ ರಮ್ಯಾ ಟ್ವೀಟ್ ವಿವಾದಕ್ಕೀಡಾಗಿರುವುದು ಎರಡನೇ ಬಾರಿ. ಪ್ರಧಾನಿ ಮೋದಿ ತಮ್ಮದೇ ಮೇಣದ ಪ್ರತಿಮೆಯಲ್ಲಿ `ಚೋರ್' ಎಂದು ಬರೆಯುತ್ತಿರುವಂತೆ ಕಾಣುವ ಚಿತ್ರವೊಂದನ್ನು ಪೋಸ್ಟ್ ಮಾಡಿ ಅವರು ಇತ್ತೀಚೆಗೆ ಟೀಕೆಗೆ ಗುರಿಯಾಗಿದ್ದರು. ಇದಕ್ಕಾಗಿ ಅವರ ವಿರುದ್ಧ ಉತ್ತರ ಪ್ರದೇಶದಲ್ಲಿ ದೇಶದ್ರೋಹ ಪ್ರಕರಣವೂ ದಾಖಲಾಗಿತ್ತು.







