ನ. 3: ಅಭಿಪ್ರಾಯ ಕ್ರೋಢೀಕರಣಕ್ಕೆ ಕಾಂಗ್ರೆಸ್ ಪ್ರಣಾಳಿಕೆಯ ತಂಡ ಆಗಮನ
'ಬ್ಯಾಂಕಿಂಗ್ ಕ್ಷೇತ್ರದಲ್ಲಾಗಬೇಕಾದ ಬದಲಾವಣೆ'
ಮಂಗಳೂರು, ನ.1: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳುವುದಕ್ಕಾಗಿ ಬ್ಯಾಕಿಂಗ್ ಕ್ಷೇತ್ರದಲ್ಲಾಗಬೇಕಾದ ಬದಲಾವಣೆ ಮತ್ತು ಮಾಹಿತಿಗಳನ್ನು ಉಡುಪಿ ಹಾಗೂ ದ.ಕ.ಜಿಲ್ಲೆಯ ಬ್ಯಾಕಿಂಗ್, ಕೈಗಾರಿಕಾ ಉದ್ದಿಮೆದಾರರು ಹಾಗೂ ಸಾರ್ವಜನಿಕರಿಂದ ಕಳೆ ಹಾಕಿಕೊಳ್ಳುವ ಸಲುವಾಗಿ ರಚಿಸಲಾದ ಸಮಿತಿಯ ಸದಸ್ಯರ ತಂಡವು ನ.3ರಂದು ಪೂ. 11ಕ್ಕೆ ಮಲ್ಲಿಕಟ್ಟೆಯಲ್ಲಿರುವ ಲಯನ್ಸ್ ಕ್ಲಬ್ ಮಂದಿರಕ್ಕೆ ಆಗಮಿಸಲಿದೆ ಎಂದು ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು ಪ್ರತಿಯೊಂದು ಪಕ್ಷ ಕೂಡ ಬಡವ-ಶ್ರೀಮಂತರ ಪರವಾದ ಪ್ರಣಾಳಿಕೆಯನ್ನು ಚುನಾವಣೆಯ ಸಮಯದಲ್ಲಿ ಸಿದ್ಧಪಡಿಸುತ್ತದೆ. ಕಾಂಗ್ರೆಸ್ ಈ ಬಾರಿ ಮಧ್ಯಮ ವರ್ಗದವರ ಸಮಸ್ಯೆ, ಸವಾಲುಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಣಾಳಿಕೆಯನ್ನು ಸಿದ್ಧಪಡಿಸುತ್ತಿದೆ. ಇದಕ್ಕಾಗಿ ದೇಶದ ನಾನಾ ಭಾಗದಲ್ಲಿ ಸಮಿತಿಯ ಮೂಲಕ ಮಾಹಿತಿ ಕಳೆಹಾಕಿಕೊಂಡು ಪ್ರಣಾಳಿಕೆ ಸಿದ್ಧಪಡಿಸುವ ಯೋಜನೆಯಿದೆ ಎಂದರು.
ಅವಿಭಜಿತ ದ.ಕ. ಜಿಲ್ಲೆ ಬ್ಯಾಕಿಂಗ್ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದೆ. ಮಂಗಳೂರಿನಲ್ಲಿ ನಡೆಯುವ ಈ ಸಮಿತಿ ಸಭೆಯಲ್ಲಿ ಬ್ಯಾಕಿಂಗ್ ಕ್ಷೇತ್ರದಲ್ಲಿ ಹಾಲಿ ಮತ್ತು ನಿವೃತ್ತರಲ್ಲದೆ ಕೈಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಹಾಗೂ ಸಾರ್ವಜನಿಕರು ಕೂಡ ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಶೋಧನಾ ಘಟಕದ ಮುಖ್ಯಸ್ಥ ಪ್ರೊ.ಎಂ.ವಿ. ರಾಜೀವ್ ಗೌಡ ಈ ಸಮಿತಿ ಸಭೆಯಲ್ಲಿ ಮಾಹಿತಿ ಕಳೆ ಹಾಕಲಿದ್ದಾರೆ ಎಂದು ಕೃಪಾ ಆಳ್ವ ನುಡಿದರು.
ಈಗಾಗಲೇ ಬೆಂಗಳೂರಿನಲ್ಲಿ ಎಂಎಸ್‌ಎಂಇ, ಶಿಕ್ಷಣ ಕುರಿತು ಸಮಿತಿ ಸಭೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ನ.4ರಂದು ಎಸ್ಸಿ-ಎಸ್ಟಿ, ಆರೋಗ್ಯ ಕ್ಷೇತ್ರದ ಕುರಿತು, ನ.10ರಂದು ಕ್ರೀಡಾ ಸೇರಿದಂತೆ ಇತರ ವಿಚಾರಗಳಲ್ಲಿ ಮಾಹಿತಿ ಕಳೆ ಹಾಕುವ ಸಭೆ ನಡೆಯಲಿದೆ.ನ.16ರಂದು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರು ಉಪನ್ಯಾಸ ನೀಡುವ ಕಾರ್ಯಕ್ರಮವಿದೆ. ಮೈಸೂರು ಹಾಗೂ ಗುಲ್ಬರ್ಗದಲ್ಲೂ ಇಂತಹ ಸಮಿತಿಯ ಸಭೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಸದಾಶಿವ ಉಳ್ಳಾಲ್ ಹಾಗೂ ಕೌಶಲ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.







