ತೊಕ್ಕೊಟ್ಟು: ಜಿಎಸ್ ಟಿ ಸುವಿಧಾ ಕೇಂದ್ರ ಉದ್ಘಾಟನೆ

ಉಳ್ಳಾಲ, ನ. 1: ತೊಕ್ಕೊಟ್ಟು ದ್ವಾರಕಾ ಕಾಂಪ್ಲೆಕ್ಸ್ ನಲ್ಲಿ ಕೇಂದ್ರ ಸರಕಾರ ಅನುಮೋದಿಸಿದ ಜಿಎಸ್ ಟಿ ಸುವಿಧಾ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಗುರುವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಮೊದಲ ಬಾರಿಗೆ ಆರಂಭವಾಗಿರುವ ಜಿಎಸ್ ಟಿ ಸುವಿಧಾ ಕೇಂದ್ರ ಜನರ ಸೇವೆಗಾಗಿ ಪರಿವರ್ತನೆ ಆಗಲಿ ಹಾಗೂ ತೆರಿಗೆ ಕುರಿತ ಜನಜಾಗೃತಿಯನ್ನು ಮೂಡಿಸುವ ಕೇಂದ್ರವಾಗಲಿ ಎಂದು ಹೇಳಿದರು.
ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಸ್ಥಾಪನೆಗೊಂಡ ಕೇಂದ್ರ ಜನಸಾಮಾನ್ಯರಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕಿದೆ. ಸದ್ಯ ಸ್ಥಿತಿಯಲ್ಲಿ ಪ್ರತಿಯೊಬ್ಬರಿಗೂ ಜಿಎಸ್ ಟಿ ಹಾಗೂ ಬ್ಯಾಂಕ್ ಖಾತೆ ಹೊಂದಿರುವುದು ಅತೀ ಅಗತ್ಯ. ಈ ಕುರಿತು ಜನರಿಗೆ ಮಾರ್ಗದರ್ಶನ ಮಾಡಲು ಕೇಂದ್ರ ಬೆಳವಣಿಗೆಯಾಗಲಿ ಎಂದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ ಚಾಟರ್ಡ್ ಅಕೌಂಟೆಂಟ್ ಮಾಡುವ ಬಹುತೇಕ ಕೆಲಸಗಳನ್ನು ಸುವಿಧಾ ಕೇಂದ್ರ ನಿರ್ವಹಿಸಲಿದೆ. ಕೇಂದ್ರ ಸರಕಾರ ಆಯೋಜಿಸಿದ್ದ 3,600 ಮಂದಿ ಆಯ್ಕೆ ಪ್ರಕ್ರಿಯೆಯಲ್ಲಿ ದೇಶಾದ್ಯಂತ 36 ಮಂದಿ ಆಯ್ಕೆಯಾಗಿದ್ದಾರೆ.
ಅದರಲ್ಲಿ ಡಾ. ಚಿರಾಗ್ ಭಟ್ ಅವರೂ ಒಬ್ಬರಾಗಿದ್ದಾರೆ. ಅವರ ನೇತೃತ್ವದಲ್ಲಿ ಸುವಿಧಾ ಕೇಂದ್ರ ಕಾರ್ಯಾಚರಣೆ ನಡೆಸಲಿದೆ. ಜನರು ತೆರಿಗೆ ವ್ಯಾಪ್ತಿಗೆ ಬರಬೇಕು ಮತ್ತು ಸರಳವಾಗಿ ಅವರ ಕೆಲಸ ಕಾರ್ಯಗಳು ನಡೆಯಬೇಕು ಅನ್ನುವ ಉದ್ದೇಶದಿಂದ ಕರ್ನಾಟಕದಾದ್ಯಂತ 2,000 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೇಂದ್ರದಲ್ಲಿ ಜಿಎಸ್ ಟಿ ನೋಂದಾವಣೆ, ಪಾವತಿಗಳು, ಆದಾಯ, ಲೆಡ್ಜರ್ ನಿರ್ವಹಣೆ, ಇ-ವೇ ಬಿಲ್ಲಿಂಗ್, ಆಡಿಟಿಂಗ್, ಆದಾಯ ತೆರಿಗೆ, ಲೆಕ್ಕಪತ್ರ, ಪಾನ್ ಕಾರ್ಡ್, ಬ್ಯಾಂಕ್ ಲೋನ್, ಪ್ರಾಜೆಕ್ಟ್ ವರದಿ, ಟಿಡಿಎಸ್ ರಿಟನ್ಸ್ ಮತ್ತು ಫಿಲ್ಲಿಂಗ್, ಲೈಸೆನ್ಸ್-ನವೀಕರಣಗಳು ಹಾಗೂ ಕಾನೂನು ವಿಚಾರಗಳ ಕುರಿತ ಸೇವೆ ಸುವಿಧಾ ಕೇಂದ್ರದ ಮೂಲಕ ಲಭ್ಯವಿದೆ ಎಂದರು.
ಜಿ.ಎಸ್.ಪಿ ಬಾಟ್ರೀ ಇದರ ಸಿ.ಇ.ಒ ಹಾಗೂ ಸ್ಥಾಪಕ ಡಾ.ಚಿರಾಗ್ ಭಟ್, ತಿರುವನಂತಪುರ ಸಿ.ಎನ್ ಇ-ಹಬ್ ನಿರ್ದೇಶಕ ಎಂ.ನಜೀಬ್, ಬೆಂಗಳೂರು ಕೇಂದ್ರ ಸಿ.ಎನ್ ಇ-ಹಬ್ ನಿರ್ದೇಶಕ ಸಜೋಷ್ ಬಾಲಕೃಷ್ಣನ್, ದಕ್ಷಿಣ ಭಾರತ ಸಿ.ಎನ್ ಇ-ಹಬ್ ನಿದೇಶಕ ನಜೀಬ್ ಎಂ.ಎಂ, ಉಳ್ಳಾಲ ನಗರಸಭೆ ಪೌರಾಯುಕ್ತೆ ವಾಣಿ.ವಿ.ಆಳ್ವ, ರಾಜ್ಯ ಡೀಲರ್ ಫಝಲ್ ಎ.ಆರ್ ಅಸೈಗೋಳಿ , ಚಲನಚಿತ್ರ ನಟಿಯರುಗಳಾದ ಅಂಬಿಕಾ ಉಳ್ಳಾಲ್ ಮತ್ತು ರಾಧಿಕಾ ಉಳ್ಳಾಲ್ ಮುಖ್ಯ ಅತಿಥಿಗಳಾಗಿದ್ದರು.
ಸುವಿಧಾ ಕೇಂದ್ರದ ಪಾಲುದಾರರಾದ ಪವನ್ ಕುಮಾರ್ ಮತ್ತು ರಾಕೇಶ್ ಯು.ಎಸ್ ಉಪಸ್ಥಿತರಿದ್ದರು.







