ಭೀಮಾ ಕೋರೆಗಾಂವ್ ಹಿಂಸಾಚಾರ: ಗೌತಮ್ ನವ್ಲಾಕಾಗೆ ನವೆಂಬರ್ 21ರವರೆಗೆ ಬಂಧನದಿಂದ ರಕ್ಷಣೆ

ಹೊಸದಿಲ್ಲಿ,ನ.1: ಮಾವೋವಾದಿಗಳ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಲ್ಲಿ ಬಂಧನ ಭೀತಿಗೆ ಒಳಗಾಗಿರುವ ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವ್ಲಾಕಾ, ನಾಗರಿಕ ಹಕ್ಕುಗಳ ಹೋರಾಟಗಾರ ಆನಂದ ತೇಲ್ತುಂಬ್ಡೆ ಮತ್ತು ಹೋರಾಟಗಾರ ಸ್ಟಾನ್ ಸ್ವಾಮಿಯ ಬಂಧನಕ್ಕೆ ನೀಡಲಾಗಿದ್ದ ಮಧ್ಯಂತರ ರಕ್ಷಣೆಯನ್ನು ಬಾಂಬೆ ಉಚ್ಚ ನ್ಯಾಯಾಲಯ ಗುರುವಾರ ನವೆಂಬರ್ 21ರ ವರೆಗೆ ವಿಸ್ತರಿಸಿದೆ.
ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರನ್ನು ರದ್ದುಗೊಳಿಸುವಂತೆ ನವ್ಲಾಕಾ, ತೇಲ್ತುಂಬ್ಡೆ ಮತ್ತು ಸ್ವಾಮಿ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಸೂಚನೆ ನೀಡಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಆಗಸ್ಟ್ 29ರಂದು ಹೋರಾಟಗಾರರಾದ ವರವರ ರಾವ್, ಅರುಣ್ ಫೆರೇರಾ, ವರ್ನನ್ ಗೊನ್ಸಾಲ್ವಿಸ್, ಸುಧಾ ಭಾರದ್ವಾಜ್ ಮತ್ತು ಗೌತಮ್ ನವ್ಲಾಕಾರನ್ನು ಗೃಹ ಬಂಧನಕ್ಕೊಳಪಡಿಸಲಾಗಿತ್ತು. ಎಲ್ಗಾರ್ ಪರಿಷದ್ ತನಿಖೆಗೆ ಸಂಬಂಧಿಸಿದಂತೆ ಪುಣೆ ಪೊಲೀಸರು ಹೋರಾಟಗಾರರ ನಿವಾಸಗಳ ಮೇಲೆ ದಾಳಿ ನಡೆಸಿದ್ದರು.
ಆಗಸ್ಟ್ 28ರಂದು ಹೋರಾಟಗಾರರಾದ ಆನಂದ ತೇಲ್ತುಂಬ್ಡೆ ಮತ್ತು ಸ್ಟಾನ್ ಸ್ವಾಮಿಯ ನಿವಾಸದ ಮೇಲೂ ಪೊಲೀಸರು ದಾಳಿ ನಡೆಸಿದ್ದರು. ಈ ಹೋರಾಟಗಾರರು ನಿಷೇಧಿತ ಸಿಪಿಐ(ಮಾವೋವಾದಿ) ಗುಂಪಿನ ಕಾರ್ಯಕರ್ತರ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಎಲ್ಗರ್ ಪರಿಷದ್‌ನಲ್ಲಿ ಮಾಡಿದ ಭಾಷಣವು 2018ರ ಜನವರಿ 1ರಂದು ನಡೆದ ಭೀಮಾ ಕೋರೆಗಾಂವ್ ಯುದ್ಧದ 200ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಹಿಂಸೆ ಭುಗಿಲೇಳಲು ಪ್ರಚೋದನೆ ನೀಡಿತ್ತು ಎಂದು ಪೊಲೀಸರು ದೂರಿದ್ದರು. ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕಳೆದ ತಿಂಗಳು ಸ್ಪಷ್ಟಪಡಿಸಿದ್ದ ಸರ್ವೋಚ್ಚ ನ್ಯಾಯಾಲಯ ಪುಣೆ ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸಬಹುದು ಎಂದು ತಿಳಿಸಿತ್ತು.







